ಪೊಲೀಸರು ಗ್ರೀಷ್ಮಾಳನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದರು
–ಪಿಟಿಐ ಚಿತ್ರ
ತಿರುವನಂತಪುರ(ಕೇರಳ): 2022ರಲ್ಲಿ ತನ್ನ ಬಾಯ್‌ಫ್ರೆಂಡ್ ಅನ್ನು ಕೊಂದಿದ್ದ ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಕೇರಳ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಮಹಿಳೆಯ ಜೊತೆಗೆ ಆಕೆಯ ಚಿಕ್ಕಪ್ಪ, ಪ್ರಕರಣದ ಮೂರನೇ ಆರೋಪಿ ನಿರ್ಮಲಕುಮರನ್ ನಾಯರ್ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನೆಯ್ಯತ್ತಿಂಕರದ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ನಮ್ಮ ಪೋಷಕರಿಗೆ ಒಬ್ಬಳೇ ಮಗಳಾಗಿರುವೆ ಹಾಗೂ ನನ್ನ ಅಕಾಡೆಮಿ ಸಾಧನೆಗಳನ್ನು ಪರಿಗಣಿಸಿ ಶಿಕ್ಷೆ ಪ್ರಮಾಣದಲ್ಲಿ ವಿನಾಯಿತಿ ನೀಡುವಂತೆ ಹತ್ಯೆ ಪ್ರಕರಣದ ಅಪರಾಧಿ 24 ವರ್ಷದ ಗ್ರೀಷ್ಮಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ನಡೆದಿರುವ ಅಪರಾಧದಲ್ಲಿ ಶಿಕ್ಷೆ ನೀಡುವಾಗ ಅಪರಾಧಿಯ ವಯಸ್ಸು ಮತ್ತು ಇನ್ನಿತರ ಯಾವುದೇ ಅಂಶಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು 586 ಪುಟಗಳ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
ಹತ್ಯೆಗೀಡಾದ ಶರಾನ್ ರಾಜ್, ತಿರುವನಂತಪುರ ಜಿಲ್ಲೆಯ ಪರಶಾಲಾ ನಿವಾಸಿಯಾಗಿದ್ದರು.
ಅಪರಾಧಿ ಮಹಿಳೆಯು ಹಂತ ಹಂತವಾಗಿ ಅಪರಾಧ ನಡೆಸಲು ಸಂಚು ರೂಪಿಸಿದ್ದನ್ನು ನ್ಯಾಯಾಲಯ ಗಮನಿಸಿದೆ. ಆಕೆ ಅಪರಾಧ ಹಿನ್ನೆಲೆಯನ್ನು ಹೊಂದಿದ್ದರು. ಇದಕ್ಕೂ ಮೊದಲೇ ಯುವಕನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಳು. ತನಿಖೆಯ ಹಾದಿ ತಪ್ಪಿಸಲು ಬಂಧನದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ನ್ಯಾಯಾಲಯ ಹೇಳಿದೆ.
ತೀರ್ಪಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಹತ್ಯೆಗೀಡಾದ ಶರಾನ್ ತಾಯಿ ಪ್ರಿಯಾ, ಇಂತಹ ಅನುಕರಣೀಯ ತೀರ್ಪು ಪ್ರಕಟಿಸಿದ ನ್ಯಾಯಾಲಯಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ತೀರ್ಪನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಎಸ್.ವಿನೀತ್ ಕುಮಾರ್, ಈ ಪ್ರಕರಣವು ಅಪರೂಪದ ಪ್ರಕರಣಗಳ ಅಡಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ಅಪರಾಧಿ ಮಹಿಳೆಯು ಕ್ರಿಮಿನಲ್ ಆಗಿದ್ದು, ಬಹಳ ದೊಡ್ಡ ಪ್ಲ್ಯಾನ್ ಮಾಡಿ ಕ್ರೂರವಾಗಿ ಹತ್ಯೆ ಮಾಡಿದ್ದಳು ಎಂದು ಅವರು ಹೇಳಿದ್ದಾರೆ..
ಹತ್ಯೆ ಮಾಡಿ ನಾನು ಸಿಲುಕಿಕೊಳ್ಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದ ಗ್ರೀಷ್ಮಾಳ ಅಪರಾಧವನ್ನು ವೈಜ್ಞಾನಿಕ ತನಿಖೆ ಮೂಲಕ ಸಾಬೀತು ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬ ಗ್ರೀಷ್ಮಾ ವಾದವನ್ನೂ ನ್ಯಾಯಾಲಯ ತಳ್ಳಿಹಾಕಿದೆ.
2022ರಲ್ಲಿ ಜ್ಯೂಸ್‌ನಲ್ಲಿ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಹಾಕಿ ಶರಾನ್‌ನನ್ನು ಕೊಲ್ಲಲು ಗ್ರೀಷ್ಮಾ ಸಂಚು ರೂಪಿಸಿದ್ದಳು. ಕಹಿ ಇದ್ದ ಕಾರಣ ಅದನ್ನು ಕುಡಿಯಲು ಶರಾನ್ ನಿರಾಕರಿಸಿದ್ದರಿಂದ ಅವಳ ಮೊದಲ ಕೊಲೆ ಯತ್ನ ವಿಫಲವಾಗಿತ್ತು ಎಂಬುದನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.
ಮಹಿಳೆಯ ಕೃತ್ಯ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದೆ ಮತ್ತು ಪ್ರೀತಿಯ ಪಾವಿತ್ರ್ಯತೆಯನ್ನು ಹಾಳುಗೆಡವಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಾಸಿಕ್ಯೂಷನ್ ಪ್ರಕಾರ, 2022ರ ಅಕ್ಟೋಬರ್ 14ರಂದು ರಾಜ್ ಅವರನ್ನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಾಂಚಿರೈನಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಗ್ರೀಷ್ಮಾ,ಆಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕುಡಿಸಿದ್ದಳು. ಬಳಿಕ, ಶರಾನ್‌ಗೆ ಬಹುಅಂಗಾಂಗ ವೈಫಲ್ಯ ಉಂಟಾಗಿತ್ತು. 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ, ಅಕ್ಟೋಬರ್ 25ರಂದು ಮೃತಪಟ್ಟಿದ್ದ.
ಗ್ರೀಷ್ಮಾಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ, ರಾಜ್ ತಮ್ಮ ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದಾಗ ಗ್ರೀಷ್ಮಾ ಈ ಕೃತ್ಯ ಎಸಗಿದ್ದಾಳೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಗ್ರೀಷ್ಮಾ ವಿರುದ್ಧ ಕೊಲೆ(ಸೆಕ್ಷನ್ 302), ಅವರ ಚಿಕ್ಕಪ್ಪನ ವಿರುದ್ಧ ಸಾಕ್ಷ್ಯ ನಾಶ(ಸೆಕ್ಷನ್ 201) ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯ ಹಹೇಳಿದೆ.
ಪ್ರಕರಣವೇನು?: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಗ್ರೀಷ್ಮಾ ಹಾಗೂ ಕೇರಳದ ತಿರುವನಂತಪುರ ಜಿಲ್ಲೆಯ ಪಾರಶ್ಶಾಲದ ಶರೋನ್ ರಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಕಾರಣಾಂತರಗಳಿಂದ ದೂರವಾಗಿದ್ದರು. ಗ್ರೀಷ್ಮಾಗೆ ಯೋಧನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಈ ಮಧ್ಯೆ, ಗ್ರೀಷ್ಮಾ–ರಾಜ್ ಪ್ರೀತಿ ಮತ್ತೆ ಚಿಗುರಿತ್ತು. ಇಬ್ಬರು ಮದುವೆಯೂ ಆಗಿದ್ದರು. ಬಳಿಕ, ಸಂಬಂಧ ಕಡಿದುಕೊಳ್ಳಲು ಗ್ರೀಷ್ಮಾ ಮುಂದಾಗಿದ್ದಳು. ಆದರೆ ಶರೋನ್ ಇದಕ್ಕೆ ಒಪ್ಪದ್ದರಿಂದ, ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದಳು.
2022ರ ಅಕ್ಟೋಬರ್ 14ರಂದು ರಾಜ್‌ನನ್ನು ಕನ್ಯಾಕುಮಾರಿಯ ರಾಮವರ್ಮನ್‌ಚಿರಾಯ್‌ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ ಆಕೆ, ಆಯುರ್ವೇದಿಕ್ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿದ್ದಳು. 11 ದಿನಗಳ ಜೀವನ್ಮರಣ ಹೋರಾಟ ನಡೆಸಿದ್ದ ಶರೋನ್, ಅ.25ರಂದು ಮೃತಪಟ್ಟಿದ್ದರು. ಈ ಪ್ರಕರಣವು ಕೇರಳದಲ್ಲಿ ಭಾರಿ ಸದ್ದು ಮಾಡಿತ್ತು.
‘ಯುವತಿಯು ನಿಧಾನಗತಿಯಲ್ಲಿ ಪರಿಣಾಮ ಬೀರುವ ವಿಷದ (ಸ್ಲೋ ಪಾಯ್ಸನ್) ಬಗ್ಗೆ ಗೂಗಲ್ ಮಾಡಿದ್ದಾಳೆ. ಬಳಿಕ, ಪ್ಯಾರಕ್ವಾಟ್ ವಿಷವನ್ನು (ಕಳೆನಾಶಕ) ಆಯುರ್ವೇದ ಜ್ಯೂಸ್‌ನಲ್ಲಿ ಬೆರೆಸಿ ಯುವಕನಿಗೆ ಕುಡಿಸಿದ್ದಾಳೆ’ ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಡಿವೈಎಸ್‌ಪಿ ಕೆ.ವೈ. ಜಾನ್ಸನ್ ಪ್ರತಿಕ್ರಿಯಿಸಿದ್ದಾರೆ.
ನ್ಯಾಯಾಲಯವು ಈ ಪ್ರಕರಣದ ಇನ್ನೊಬ್ಬ ಆರೋಪಿ ಗ್ರೀಷ್ಮಾಳ ತಾಯಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಶುಕ್ರವಾರ ಖುಲಾಸೆಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.