
ಕೊಲ್ಲಂ (ಕೇರಳ): ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿವಿಧ ಕಲಾಕೃತಿಗಳು ಮತ್ತು ಬಾಗಿಲು ಚೌಕಟ್ಟುಗಳನ್ನು ಒಳಗೊಂಡ ತಾಮ್ರದ ಕವಚಗಳ ಮೇಲೆ ಲೇಪಿಸಿರುವ ಚಿನ್ನದ ಲೇಪನದ ಮಾದರಿಯ ವೈಜ್ಞಾನಿಕ ವಿಶ್ಲೇಷಣೆ ವರದಿಯನ್ನು ಕೇರಳ ಹೈಕೋರ್ಟ್ ಆದೇಶದಂತೆ ಇಲ್ಲಿನ ತ್ವರಿತ ನ್ಯಾಯಾಲಯವು ಶನಿವಾರ ಎಸ್‌ಐಟಿಗೆ ಹಸ್ತಾಂತರಿಸಿದೆ.
ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ) ಸಿದ್ಧಪಡಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಅದನ್ನು ಶುಕ್ರವಾರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸ್‌ಐಟಿ ಸೋಮವಾರ ಕೇರಳ ಹೈಕೋರ್ಟ್‌ಗೆ ವರದಿಯ ಬಗ್ಗೆ ವಿವರಿಸಲಿದೆ. ನಂತರ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿವೆ.
2019ರಲ್ಲಿ ದ್ವಾರಪಾಲಕ ಮೂರ್ತಿಗಳ ಕವಚಗಳು ಹಾಗೂ ಗರ್ಭಗುಡಿಯ 7 ಚಿನ್ನ ಲೇಪಿತ ತಾಮ್ರದ ಕವಚವನ್ನು ಸ್ಮಾರ್ಟ್ ಕ್ರಿಯೇಷನ್ಸ್‌ನಲ್ಲಿ ಎಲೆಕ್ಟ್ರೋಪ್ಲೇಟಿಂಗ್ ಮಾಡಿಸಲು ಉಣ್ಣಿಕೃಷ್ಣನ್ ಅವರಿಗೆ ನೀಡಲಾಗಿತ್ತು. ಈ ಪ್ರಕ್ರಿಯೆ ಮುಗಿದ ನಂತರ ಆರೋಪಿಗಳು ಉಳಿದ ಚಿನ್ನವನ್ನು ಕಳವು ಮಾಡಿದ್ದಾರೆ ಎಂದು ಎಸ್ಐಟಿ ಉಲ್ಲೇಖಿಸಿದೆ.
ತನಿಖೆ ವೇಳೆ ಆರೋಪಿಗಳಿಂದ ವಶಪಡಿಸಿಕೊಂಡಿರುವ ಈ ಚಿನ್ನದ ಪ್ರಮಾಣಕ್ಕಿಂತಲೂ ಹೆಚ್ಚಿನ ಚಿನ್ನ ಕವಚಗಳಿಂದ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವೈಜ್ಞಾನಿಕ ವಿಶ್ಲೇಷಣೆಗೆ ತಾಮ್ರದ ಕವಚಗಳ ಮೇಲೆ ಲೇಪಿಸಿರುವ ಚಿನ್ನದ ಲೇಪನದ ಮಾದರಿಯನ್ನು ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಕಳುಹಿಸಲಾಗಿತ್ತು.
ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಎಸ್‌ಐಟಿ ಇದುವರೆಗೆ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಇಬ್ಬರು ಮಾಜಿ ಅಧ್ಯಕ್ಷರು ಸೇರಿ 12 ಆರೋಪಿಗಳನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.