ADVERTISEMENT

ರಾಹುಲ್‌ ಗಾಂಧಿ ಆಯ್ಕೆ ಅನರ್ಥಕಾರಿ: ರಾಮಚಂದ್ರ ಗುಹಾ

ಕೇರಳ ಸಾಹಿತ್ಯೋತ್ಸವ

ಪಿಟಿಐ
Published 19 ಜನವರಿ 2020, 2:39 IST
Last Updated 19 ಜನವರಿ 2020, 2:39 IST
ಇತಿಹಾಸಕಾರ ರಾಮಚಂದ್ರ ಗುಹಾ
ಇತಿಹಾಸಕಾರ ರಾಮಚಂದ್ರ ಗುಹಾ   

ಕೋಯಿಕ್ಕೋಡ್‌: ‘ರಾಹುಲ್‌ ಗಾಂಧಿಯನ್ನು ಇಲ್ಲಿಂದ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸುವ ಮೂಲಕ ಕೇರಳದ ಜನತೆ ಭಾರಿ ಅನರ್ಥಕಾರಿ ಕೆಲಸ ಮಾಡಿದ್ದಾರೆ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಶನಿವಾರ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಕೇರಳ ಸಾಹಿತ್ಯೋತ್ಸವದಲ್ಲಿ ಎರಡನೇ ದಿನದ ಗೋಷ್ಠಿಯಲ್ಲಿ ‘ದೇಶಭಕ್ತಿ– ಆಡಂಬರದ ದೇಶಭಕ್ತಿ’ ಎಂಬ ವಿಷಯ ಕುರಿತು ಮಾತನಾಡಿದ ಅವರು, ‘ಕಠಿಣ ಪರಿಶ್ರಮ ಮತ್ತು ಸ್ವಂತ ವರ್ಚಸ್ಸಿನಿಂದ ರಾಜಕಾರಣದಲ್ಲಿ ಮೇಲೆ ಬಂದಿರುವ ನರೇಂದ್ರ ಮೋದಿಗೆ, ರಾಹುಲ್‌ ಸಮಪೈಪೋಟಿ ನೀಡಲಾರರು’ ಎಂದರು.

‘ಕೇರಳ ಜನತೆ ದೇಶಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಆದರೆ, ಇಲ್ಲಿಂದ ಸಂಸತ್‌ಗೆ ರಾಹುಲ್‌ಗಾಂಧಿಯನ್ನು ಆಯ್ಕೆ ಮಾಡಿರುವುದು ನೀವು ಮಾಡಿರುವ ದೊಡ್ಡ ತಪ್ಪು’ ಎಂದು ಹೇಳಿದರು.

ADVERTISEMENT

‘ನನಗೆ ರಾಹುಲ್‌ ಗಾಂಧಿ ಬಗ್ಗೆ ವೈಯಕ್ತಿಕವಾಗಿ ದ್ವೇಷ ಇಲ್ಲ. ಅವರು ಒಳ್ಳೆಯ ನಡವಳಿಕೆಯ, ಸಭ್ಯ ವ್ಯಕ್ತಿ. ಆದರೆ, ಒಂದು ವಂಶದ ಐದನೇ ಪೀಳಿಗೆ ವ್ಯಕ್ತಿಯನ್ನು ಈಗಿನ ಭಾರತದ ಯುವಜನತೆ ಇಷ್ಟಪಡುತ್ತಿಲ್ಲ. ಹೀಗಾಗಿ 2024ರಲ್ಲಿಯೂ ನೀವು ರಾಹುಲ್‌ ಗಾಂಧಿಯನ್ನು ಮತ್ತೆ ಗೆಲ್ಲಿಸುವ ತಪ್ಪು ಮಾಡಿದರೆ, ನೀವಾಗಿಯೇ ನರೇಂದ್ರ ಮೋದಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಮೋದಿ ಅವರು ರಾಹುಲ್‌ ಗಾಂಧಿ ಥರ ಅಲ್ಲ. ಅವರೊಬ್ಬ ಅದ್ಭುತ, ದಣಿವರಿಯದ ಕೆಲಸಗಾರ. ಅವರು ಎಂದೂ ಯುರೋಪ್‌ಗೆ ತೆರಳಿ ರಜಾದಿನಗಳನ್ನು ಕಳೆಯುವುದಿಲ್ಲ. ಈ ಎಲ್ಲಾ ಮಾತುಗಳನ್ನು ನಾನು ಗಂಭೀರವಾಗಿಯೇ ಹೇಳುತ್ತಿದ್ದೇನೆ’ ಎಂದು ಗುಹಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.