ADVERTISEMENT

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಭಯೋತ್ಪಾದಕರಿಗೆ ನೆರವಾಗುವುದೇ ಗುರಿ ಎಂದ ಎನ್‌ಐಎ

‘ಕಳ್ಳಸಾಗಾಣಿಕೆಗೆ ಯುಎಇ ದೂತಾವಾಸದ ನಕಲಿ ದಾಖಲೆಗಳ ಬಳಕೆ’

ಅರ್ಜುನ್ ರಘುನಾಥ್
Published 14 ಜುಲೈ 2020, 2:46 IST
Last Updated 14 ಜುಲೈ 2020, 2:46 IST
ಆರೋಪಿ ಸಂದೀಪ್ ನಾಯರ್‌ನನ್ನು ಕೊಚ್ಚಿಯ ಕಸ್ಟಮ್ಸ್ ಕಚೇರಿಗೆ ವಿಚಾರಣೆಗಾಗಿ ಕರೆದೊಯ್ದ ಸಂದರ್ಭದ ಚಿತ್ರ – ಪಿಟಿಐ ಚಿತ್ರ
ಆರೋಪಿ ಸಂದೀಪ್ ನಾಯರ್‌ನನ್ನು ಕೊಚ್ಚಿಯ ಕಸ್ಟಮ್ಸ್ ಕಚೇರಿಗೆ ವಿಚಾರಣೆಗಾಗಿ ಕರೆದೊಯ್ದ ಸಂದರ್ಭದ ಚಿತ್ರ – ಪಿಟಿಐ ಚಿತ್ರ   

ತಿರುವನಂತಪುರ: ‘ಕೇರಳದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಉದ್ದೇಶದಿಂದ ಕೂಡಿದೆ. ಕಳ್ಳಸಾಗಾಣಿಕೆ ತಂಡವು ಕೃತ್ಯಕ್ಕಾಗಿ ಯುಎಇ ದೂತಾವಾಸದ ನಕಲಿ ದಾಖಲೆಗಳನ್ನು ಬಳಸಿತ್ತು’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎಎನ್‌ಐ) ಹೇಳಿದೆ.

ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಸ್ವಪ್ನಾ ಸುರೇಶ್‌ ಮತ್ತು ಸಂದೀಪ್ ನಾಯರ್ ನೀಡಿದ ಮಾಹಿತಿ ಆಧಾರದಲ್ಲಿ ಯುಎಇ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿಯೊಬ್ಬರ ವಿಚಾರಣೆಗೆ ಅನುಮತಿ ಕೋರಿ ಕೊಚ್ಚಿಯಲ್ಲಿರುವ ಎನ್‌ಐಎ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಬಂಧಿತ ಆರೋಪಗಳನ್ನು ಸದ್ಯ ವಿಚಾರಣೆಗಾಗಿ ಎನ್‌ಐಎ ವಶಕ್ಕೊಪ್ಪಿಸಲಾಗಿದೆ.

ಮೂಲಗಳ ಪ್ರಕಾರ, ಬಂಧಿತ ಆರೋಪಿಗಳು ಚಿನ್ನ ಕಳ್ಳಸಾಗಾಣಿಕೆ ನಡೆಸಲು ಯುಎಇ ದೂತಾವಾಸ ಕಚೇರಿಯ ನಕಲಿ ಲಾಂಛನ ಮತ್ತು ಸೀಲ್‌ಗಳನ್ನು ಬಳಸಿದ್ದರು. ಅವುಗಳನ್ನು ಬಳಸಿಕೊಂಡು ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಾಣಿಕೆ ನಡೆಸಿದ್ದರು. ದೂತಾವಾಸ ಕಚೇರಿ ಅಧಿಕಾರಿಗಳಿಗೆ ಗೊತ್ತಾಗದಂತೆ ಆರೋಪಿಗಳು ಈ ಕೃತ್ಯ ನಡೆಸಿರಬಹುದು ಎಂದು ನ್ಯಾಯಾಲಯದ ಮುಂದೆ ತನಿಖಾ ಸಂಸ್ಥೆ ಹೇಳಿದೆ ಎನ್ನಲಾಗಿದೆ.

ADVERTISEMENT

ಪ್ರಕರಣದ ಮೂರನೇ ಆರೋಪಿ ಫೈಜಲ್ ಫರೀದ್‌ನನ್ನು ಬಂಧಿಸಲು ವಾರಂಟ್‌ಗಾಗಿಯೂ ಎನ್‌ಐಎ ಮನವಿ ಸಲ್ಲಿಸಿದೆ. ಫರೀದ್‌ ಯುಎಇಯಲ್ಲಿ ಇದ್ದಾನೆ ಎನ್ನಲಾಗಿದ್ದು, ಆತನ ಗಡಿಪಾರು ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಈ ಮಧ್ಯೆ, ಭಾನುವಾರ ಬಂಧನಕ್ಕೊಳಗಾಗಿರುವ ಮಲಪ್ಪುರಂ ನಿವಾಸಿ ಕೆ.ಟಿ.ರಮೀಜ್ ಈ ಹಿಂದೆಯೂ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂಬುದು ತಿಳಿದುಬಂದಿದೆ. ರಮೀಜ್ ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಸೂತ್ರಧಾರ ಇರಬಹುದು ಎಂದು ಶಂಕಿಸಲಾಗಿದೆ.

ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್‌ ಯುಎಇ ದೂತಾವಾಸದ ಮಾಜಿ ಸಿಬ್ಬಂದಿ ಜತೆ ಶಾಮೀಲಾಗಿದ್ದಾರೆ ಎಂಬ ಆರೋಪ ಇತ್ತೀಚೆಗೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ, ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿತ್ತು. ಪ್ರಕರಣವು ಕೇರಳದಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.