ಪಿಣರಾಯಿ ವಿಜಯನ್, ಕೇರಳ ಸಿಎಂ
ತಿರುವನಂತಪುರ: ಸಾರ್ವಜನಿಕರ ದೂರು ಅಥವಾ ಅರ್ಜಿಗಳಿಗೆ ಉತ್ತರಿಸುವಾಗ ಮುಖ್ಯಮಂತ್ರಿ, ಸಚಿವರ ಹೆಸರಿನ ಮುಂದೆ ‘ಗೌರವಾನ್ವಿತ’ ಎನ್ನುವ ಪದ ಬಳಸಬೇಕು ಎಂದು ಕೇರಳ ಸರ್ಕಾರದ ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಬಗ್ಗೆ ಆಗಸ್ಟ್ 30ರಂದು ಸುತ್ತೋಲೆ ಹೊರಡಿಸಲಾಗಿದ್ದು, ದೂರುಗಳಿಗೆ ನೀಡುವ ಉತ್ತರದಲ್ಲಿ ಮುಖ್ಯಮಂತ್ರಿ ಅಥವಾ ಸಚಿವರ ಹೆಸರಿನ ಮುಂದೆ ‘ಬಹುಮಾನಪೆಟ್ಟ’ (ಗೌರವಾನ್ವಿತ) ಎಂದು ಬಳಸಬೇಕು ಎಂದು ಇಲಾಖೆಯ ಕಾರ್ಯದರ್ಶಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಕಚೇರಿಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಉತ್ತರಗಳನ್ನು ಬರೆಯುವಾಗ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಎದುರಿಸಬೇಕಾದೀತು ಎಂದೂ ಎಚ್ಚರಿಕೆ ನೀಡಲಾಗಿದೆ.
ಅಧಿಕೃತ ಸಂವಹನದಲ್ಲಿ ಗೌರವದಿಂದ ಸಂಬೋಧಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ ಎನ್ನುವ ಅಭಿಪ್ರಾಯಗಳು ದೇಶದಾದ್ಯಂತ ಕೇಳಿ ಬರುತ್ತಿರುವಾಗಲೇ, ಕೇರಳ ಸರ್ಕಾರದಿಂದ ಈ ನಡೆ ಬಂದಿದೆ.
ಆಡಳಿತ ಸುಧಾರಣಾ ಇಲಾಖೆಯು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಸುತ್ತೋಲೆಯು ಅವರ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ. ಆದರೆ ಸರ್ಕಾರ ಈ ನಿರ್ಧಾರದ ಹಿಂದಿನ ಕಾರಣ ತಿಳಿಸಿಲ್ಲ.
ಸರ್ಕಾರದ ಈ ಸುತ್ತೋಲೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.