ತಿರುವನಂತಪುರ: ‘ಗುರುಗಳ ಪಾದಗಳಿಗೆ ಪುಷ್ಪಾರ್ಚನೆ ಮಾಡುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ’ ಎನ್ನುವ ಮೂಲಕ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರು ಭಾನುವಾರ ಗುರು ಪೂಜೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗೆ ಕೇರಳದ ಎರಡು ಸಿಬಿಎಸ್‌ಇ ಶಾಲೆಗಳಲ್ಲಿ ಗುರು ಪೂಜೆ ಪ್ರಯುಕ್ತ ‘ಪಾದ ಪೂಜೆ’ ಆಯೋಜಿಸಿದ್ದನ್ನು ಕೇರಳದ ಎಲ್‌ಡಿಎಫ್ ಸರ್ಕಾರವು ಟೀಕಿಸಿತ್ತು. ಘಟನೆಯ ಕುರಿತು ವರದಿ ನೀಡುವಂತೆ ಶಾಲಾಡಳಿತಕ್ಕೆ ನೋಟಿಸ್ ನೀಡಿತ್ತು.
ಬಲರಾಮಪುರಂನಲ್ಲಿ ಬಾಲಗೋಕುಲಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ಟೀಕೆಗೆ ಪ್ರತಿಕ್ರಿಯಿಸಿರುವ ರಾಜ್ಯಪಾಲರು, ‘ಗುರು ಪೂಜೆಯು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಆದರೆ, ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ಇವರೆಲ್ಲರೂ ಯಾವ ಸಂಸ್ಕ್ರತಿಯಿಂದ ಬಂದಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.
‘ಗುರುಗಳು ಪವಿತ್ರ ಸ್ಥಾನದಲ್ಲಿದ್ದು, ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ನಾವು ನಮ್ಮ ಸಂಸ್ಕೃತಿಯನ್ನು ಮರೆತರೆ, ನಮ್ಮತನವನ್ನೇ ಕಳೆದುಕೊಂಡಂತೆ’ ಎಂದು ಹೇಳಿದ್ದಾರೆ.
ಈ ಘಟನೆಯು ಕೇರಳದ ಜಾತ್ಯತೀತ ನಿಲುವನ್ನು ನಾಶಪಡಿಸಲು ಆರ್‌ಎಸ್‌ಎಸ್ ಮಾಡುತ್ತಿರುವ ಪ್ರಯತ್ನವಾಗಿದೆ. ಗುರುಗಳಿಗೆ ಗೌರವಿಸುವುದನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ, ಗೌರವದ ಹೆಸರಿನಲ್ಲಿ ಶತಮಾನಗಳ ಹಿಂದೆಯೇ ನಿಷೇಧಿಸಲ್ಪಟ್ಟಿರುವ ಆಚರಣೆಗಳನ್ನು ಆಚರಿಸುವುದು ಜಾತಿ ಪದ್ದತಿಯನ್ನು ಮರುಕಳಿಸಿದಂತಾಗುತ್ತದೆ. ಯುವ ಜನರಲ್ಲಿ ಗುಲಾಮತನ ಬಿತ್ತುವ ಕೆಲಸವನ್ನು ಆರ್‌ಎಸ್‌ಎಸ್ ಹಿಡಿತವಿರುವ ಶಾಲೆಗಳು ಮಾಡುತ್ತಿವೆ ಎಂದು ಸಿಪಿಐ(ಮಾವೋವಾದಿ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಟೀಕಿಸಿದ್ದಾರೆ.
ಶಿಕ್ಷಣವು ಯುವ ಜನರಲ್ಲಿ ಜ್ಞಾನ ಮತ್ತು ಅರಿವನ್ನು ಮೂಡಿಸಬೇಕು. ಶಾಲೆಗಳಲ್ಲಿ ಪಾದಪೂಜೆಯು ಖಂಡನೀಯ ಮತ್ತು ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಕೇರಳದ ಶಿಕ್ಷಣ ಸಚಿವ ವಿ. ಶಿವಕುಟ್ಟಿ ಅವರು ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಬಳಿಯ ಭಾರತೀಯ ವಿದ್ಯಾನಿಕೇತನ ಸಂಸ್ಥೆಯ ಅಡಿಯಲ್ಲಿರುವ ಎರಡು ಸಿಬಿಎಸ್‌ಇ ಶಾಲೆಗಳಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ‘ಪಾದ ಪೂಜೆ’ ಮಾಡಲಾಗಿತ್ತು. ಘಟನೆಗೆ ಕೇರಳ ಸರ್ಕಾರ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.