ಕೋಯಿಕ್ಕೋಡ್: ‘ಗುರು ಪೂಜೆ, ಭಾರತ ಮಾತೆಯನ್ನು ವಿಮರ್ಶಿಸುವವರು ತೋರಿಕೆಗಷ್ಟೇ ಶಬರಿಮಲೆಯ ಭಕ್ತರಂತೆ ನಟಿಸುತ್ತಿದ್ದಾರೆ’ ಎಂದು ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪರೋಕ್ಷ ವಾಗ್ದಾಳಿ ನಡೆಸಿದರು.
‘ಶಬರಿಮಲೆಯ ಈ ನಕಲಿ ಭಕ್ತರು ತಮ್ಮ ಮನಸ್ಸಿನೊಳಗಿರುವ ಪವಿತ್ರತೆ, ಆದರ್ಶ ಮತ್ತು ಭಾವನೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಬೇಕು’ ಎಂದು ನವರಾತ್ರಿ ಸಂಬಂಧಿತ ಕಾರ್ಯಕ್ರಮವೊಂದರಲ್ಲಿ ಹೇಳಿದರು.
‘ಅವರೆಲ್ಲರೂ ಏಕೆ ಹೀಗೆ ಮಾಡುತ್ತಿದ್ದಾರೆ. ರಾಜಕೀಯ ಅನುಕೂಲಕ್ಕಾಗಿ ಮಾತ್ರವಾ? ಭಾರತ ಮಾತೆ, ಗುರು ಪೂಜೆ ಮತ್ತು ಅಂತಹ ಎಲ್ಲ ವಿಷಯಗಳು ರಾಜಕೀಯವಾಗಿ ಯಾರಿಗೂ ಅನುಕೂಲಕರವಲ್ಲ. ಇದು ನಮ್ಮ ರಕ್ತ, ಚಿಂತನೆ ಮತ್ತು ಎಲ್ಲದರಲ್ಲೂ ಅಡಕವಾಗಿದೆ. ನಾವು ರಾಜಕೀಯ ಪ್ರೇರಿತರಲ್ಲ’ ಎಂದರು.
‘ಭಾರತೀಯ ಸಂಸ್ಕೃತಿ ಭಾಗವಾಗಿರುವ ಇವೆಲ್ಲವನ್ನೂ ನಿರ್ಲಕ್ಷಿಸಲಾಗುವುದಿಲ್ಲ’ ಎಂದೂ ಹೇಳಿದರು.
‘ಶಾಲೆಗಳಲ್ಲಿ ಗುರು ಪೂಜೆ ವೇಳೆ ವಿದ್ಯಾರ್ಥಿಗಳು ಪಾದ ತೊಳೆಯುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಹಲವು ಶಿಕ್ಷಕರು, ಪ್ರಾಂಶುಪಾಲರೇ ತಮ್ಮ ಬಳಿ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಸಾಂಸ್ಕೃತಿಕವಾಗಿ ಅತ್ಯುನ್ನತ ಮಟ್ಟದಲ್ಲಿರುವ ರಾಜ್ಯದಲ್ಲಿ ಇದು ಹೇಗೆ ನಡೆಯುತ್ತಿದೆ ಎಂಬ ಆಶ್ಚರ್ಯ ನನ್ನದಾಗಿದೆ. ಕೇರಳವು ಸಾಂಸ್ಕೃತಿಕವಾಗಿ ಸಿರಿವಂತವಾಗಿದೆ. ಆದರೆ ಈ ಎಲ್ಲಾ ವಿಷಯಗಳೂ ಇಲ್ಲಿಯೇ ನಡೆಯುತ್ತಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.