ADVERTISEMENT

ವಯನಾಡ್ ಪುನರ್ವಸತಿಗೆ ಕೇಂದ್ರದ ನಿಧಿ ಬಳಕೆಯಲ್ಲಿ ಕೇರಳ ಸರ್ಕಾರ ವಿಫಲ: ಬಿಜೆಪಿ

ಪಿಟಿಐ
Published 8 ಡಿಸೆಂಬರ್ 2024, 10:29 IST
Last Updated 8 ಡಿಸೆಂಬರ್ 2024, 10:29 IST
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್   

ತಿರುವನಂತಪುರ: ಭೀಕರ ಭೂಕುಸಿತದಿಂದ ತತ್ತರಿಸಿರುವ ವಯನಾಡ್ ಪುನರ್ವಸತಿಗೆ ಕೇಂದ್ರ ಸರ್ಕಾರದ ನಿಧಿ ಬಳಕೆ ಮಾಡಿಕೊಳ್ಳುವಲ್ಲಿ ಕೇರಳ ಸರ್ಕಾರ ವಿಫಲವಾಗಿದೆ ಎಂದು ಭಾನುವಾರ ಬಿಜೆಪಿ ಆರೋಪಿಸಿದೆ.

ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಧಿಯನ್ನು ವಯನಾಡ್ ಸಂತ್ರಸ್ತರ ಪುನಶ್ಚೇತನಕ್ಕೆಸೂಕ್ತವಾಗಿ ಬಳಸಿಕೊಳ್ಳದೆ, ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ ಎಂದು ಬಿಜೆಪಿ ದೂರಿದೆ.

ರಾಜ್ಯ ವಿಪತ್ತು ಸ್ಪಂದನೆ ನಿಧಿ(ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನೆ ನಿಧಿ(ಎನ್‌ಡಿಆರ್‌ಎಫ್) ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇರಳಕ್ಕೆ ಸೂಕ್ತ ಪ್ರಮಾಣದ ನೆರವು ನೀಡಿದೆ. ಸಿಎಂ ಪಿಣರಾಯಿ ವಿಜಯನ್ ನಿಧಿಯನ್ನು ಇಟ್ಟುಕೊಂಡೂ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ADVERTISEMENT

ಎಸ್‌ಡಿಆರ್‌ಎಫ್ ಮೂಲಕ ಕೇಂದ್ರ ₹500 ಕೋಟಿ ಬಿಡುಗಡೆ ಮಾಡಿದೆ. ಎಸ್‌ಡಿಆರ್‌ಎಫ್‌ನಲ್ಲಿ ಈಗಾಗಲೇ ಬಾಕಿ ಇರುವ ₹700 ಕೋಟಿ ವಿಪತ್ತು ಸ್ಪಂದನಾ ನಿಧಿಯನ್ನೇ ಕೇರಳ ಸರ್ಕಾರ ಬಳಸಿಕೊಂಡಿಲ್ಲ. ಅದರ ಜೊತೆಗೆ ಜನರು ಸಹ ವಿಶ್ವದ ವಿವಿಧೆಡೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡಿದ್ದಾರೆ. ಆ ಹಣವೂ ಬಳಕೆಯಾಗಿಲ್ಲ. ಆದರೂ ಕೇಂದ್ರವನ್ನು ಟೀಕಿಸುತ್ತಿರುವುದು ಎಲ್‌ಡಿಎಫ್ ಮತ್ತು ಯುಡಿಎಫ್‌ನ ಕಪಟತನವನ್ನು ತೋರಿಸುತ್ತದೆ ಎಂದು ಜಾವಡೇಕರ್ ದೂರಿದ್ದಾರೆ.

ವಯನಾಡ್‌ನಲ್ಲಿ ಪುನರ್ವಸತಿ ಕೈಗೊಳ್ಳದ ಕುರಿತಂತೆ ಇತ್ತೀಚೆಗೆ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ವಿಚಾರವನ್ನು ಪ್ರಸ್ತಾಪಿಸಿರುವ ಜಾವಡೇಕರ್, ಆಡಳಿತಾರೂಢ ಎಲ್‌ಡಿಎಪ್ ಮತ್ತು ವಿಪಕ್ಷ ಯುಡಿಎಫ್‌ನ ಸುಳ್ಳು ನ್ಯಾಯಾಲಯದಲ್ಲಿ ಬಯಲಾಗಿದೆ ಎಂದಿದ್ದಾರೆ.

ವಯನಾಡ್‌ನ ಭೂಕುಸಿತ ಪೀಡಿತ ಪ್ರದೇಶಗಳ ಪುನರ್ವಸತಿನಿಧಿಗೆ ಸಂಬಂಧಿಸಿದ ಅವರ ಅಂಕಿಅಂಶಗಳು ಅಸಮರ್ಪಕ ಎಂದು ಕೇರಳ ಹೈಕೋರ್ಟ್ ಶನಿವಾರ ರಾಜ್ಯ ಸರ್ಕಾರ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (ಎಸ್‌ಡಿಎಂಎ) ಟೀಕಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಸರ್ಕಾರವು ವಿಶೇಷ ಪ್ಯಾಕೇಜ್ ಮತ್ತು ಹೆಚ್ಚುವರಿ ಸಹಾಯ ಧನದ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿರುವುದಾಗಿ ಪುನರುಚ್ಚರಿಸಿತು. ಎಸ್‌ಡಿಆರ್‌ಎಫ್‌ನಲ್ಲಿ ಇರುವ ನಿಧಿಯನ್ನು ಬಳಸಲು ಅಸ್ತಿತ್ವದಲ್ಲಿರುವ ಮಾನದಂಡಗಳಿಂದಾಗಿ ನಿರ್ಬಂಧಗಳಿವೆ. ಅಲ್ಲದೆ, ಭೂಕುಸಿತದ ಪ್ರದೇಶಗಳ ನಿರ್ದಿಷ್ಟ ಸಮಸ್ಯೆಗಳನ್ನು ಅದರಿಂದ ಪರಿಹರಿಸಲಾಗುವುದಿಲ್ಲ ಎಂದು ರಾಜ್ಯ ಕಂದಾಯ ಸಚಿವ ಕೆ ರಾಜನ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.