ADVERTISEMENT

ದೋಣಿ ದುರಂತ |ನಿಯಮ ಕಡೆಗಣಿಸಿ ಕಾರ್ಯಾಚರಿಸಲು ಬಿಟ್ಟಿದ್ದೇಕೆ? –ಕೇರಳ ಹೈಕೋರ್ಟ್‌

ಪಿಟಿಐ
Published 9 ಮೇ 2023, 11:06 IST
Last Updated 9 ಮೇ 2023, 11:06 IST
ಕೇರಳ ಹೈಕೋರ್ಟ್ –ಸಂಗ್ರಹ ಚಿತ್ರ
ಕೇರಳ ಹೈಕೋರ್ಟ್ –ಸಂಗ್ರಹ ಚಿತ್ರ   

ಕೊಚ್ಚಿ: ಕೇರಳದ ತೂವಲ್‌ತೀರ ಬೀಚ್ ಸಮೀಪ ಭಾನುವಾರ ಸಂಭವಿಸಿದ ದೋಣಿ ದುರಂತ ಭಯಾನಕ ಹಾಗೂ ಆಘಾತಕಾರಿ ಎಂದಿರುವ ಕೇರಳ ಹೈಕೋರ್ಟ್‌, ಈ ಸಂಬಂಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆಯನ್ನು ಮಂಗಳವಾರ ಆರಂಭಿಸಿತು.

‘ನಿಯಮಗಳನ್ನು ಕಡೆಗಣಿಸಿ ದೋಣಿ ಕಾರ್ಯಾಚರಿಸಲು ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಿದ್ದೇಕೆ’ ಎಂದೂ ಪ್ರಶ್ನಿಸಿದೆ.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ರಾಮಚಂದ್ರನ್ ಹಾಗೂ ಶೋಭಾ ಅನ್ನಮ್ಮ ಈಪ್ಪನ್, ‘ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸಬಾರದು ಎಂಬ ಉದ್ದೇಶದೊಂದಿಗೆ ಸ್ವಯಂ ಪ್ರೇರಿತವಾಗಿ ಪಿಐಎಲ್‌ ದಾಖಲಿಸಿ, ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

ADVERTISEMENT

‘ದುರಂತದ ಸ್ಥಳದಲ್ಲಿ ಕಂಡುಬಂದ ಪ್ರಾಣ ಕಳೆದುಕೊಂಡಿದ್ದ ಮಕ್ಕಳ ದೇಹಗಳನ್ನು ನೋಡಿ ನಾವು ರಾತ್ರಿಯಿಡೀ ನಿದ್ದೆಯನ್ನೇ ಮಾಡಿಲ್ಲ. ನಮ್ಮ ಹೃದಯ ಒಡೆದು ಹೋಗಿದೆ’ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಅಧಿಕಾರಿಗಳಲ್ಲಿ ಮನೆ ಮಾಡಿರುವ ಉದಾಸೀನತೆ, ಹೃದಯಶೂನ್ಯತೆ ಹಾಗೂ ದುರಾಸೆಯಿಂದಾಗಿಯೇ ಈ ಘೋರ ಅವಘಡ ಸಂಭವಿಸಿದೆ’ ಎಂದು ಕಟು ಮಾತುಗಳಲ್ಲಿ ಹೇಳಿದರು.

‘ಕೊಲ್ಲಂನಿಂದ ಕೋಟಯಂಗೆ ಹೊರಟಿದ್ದ ದೋಣಿ ಪಾಳನ ಎಂಬಲ್ಲಿ 1924ರಲ್ಲಿ ಮುಳುಗಿತು. ಆ ನತದೃಷ್ಟ ದೋಣಿಯಲಿದ್ದ ಕೇರಳದ ಮಹಾಕವಿ ಕುಮಾರ್ ಆಶಾನ್ ಮೃತಪಟ್ಟರು. ಆಗಿನಿಂದಲೂ ರಾಜ್ಯದಲ್ಲಿ ಗಾಬರಿಗೊಳಿಸುವ ರೀತಿಯಲ್ಲಿ ದೋಣಿ ದುರಂತಗಳು ಸಂಭವಿಸುತ್ತಲೇ ಇವೆ’ ಎಂದು ನ್ಯಾಯಪೀಠ ಹೇಳಿತು.

ಮಲಪ್ಪುರ ಜಿಲ್ಲೆಯ ತಾನೂರಿನ ತೂವಲ್‌ತೀರ ಬೀಚ್‌ ಸಮೀಪ ಭಾನುವಾರ ದೋಣಿ ಮಗುಚಿತ್ತು. 15 ಮಕ್ಕಳು ಸೇರಿ 22 ಮಂದಿ ಮೃತಪಟ್ಟಿದ್ದರು. ಆ ನತದೃಷ್ಟ ದೋಣಿಯಲ್ಲಿ 37 ಮಂದಿ ಇದ್ದರು.

ಎನ್‌ಡಿಆರ್‌ಎಫ್‌ನಿಂದ ಮುಂದುವರಿದ ಶೋಧ ಮಲಪ್ಪುರ
ದೋಣಿ ದುರಂತ ಸಂಭವಿಸಿದ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್‌) ಸಿಬ್ಬಂದಿ ಮಂಗಳವಾರವೂ ಶೋಧ ಕಾರ್ಯವನ್ನು ಮುಂದುವರಿಸಿತು. ದುರಂತಕ್ಕೀಡಾದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರ ಸಂಖ್ಯೆ ಕುರಿತು ಗೊಂದಲವಿರುವ ಕಾರಣ ಎನ್‌ಡಿಆರ್‌ಎಫ್‌ ಸಿಬ್ಬಂದಿ ಶೋಧ ಕಾರ್ಯವನ್ನು ಮುಂದುವರಿಸಿವೆ ಎಂದು ಮೂಲಗಳು ತಿಳಿಸಿವೆ. ‘ಕೊನೆ ಟ್ರಿಪ್‌ ಎಂಬ ಕಾರಣಕ್ಕಾಗಿ ಸಾಕಷ್ಟು ಜನರು ದೋಣಿ ಏರಿದ್ದರು ಎಂಬುದಾಗಿ ಕೆಲ ಪ್ರತ್ಯಕ್ಷದರ್ಶಿಗಳು ಹಾಗೂ ಈ ಅವಘಡದಲ್ಲಿ ಬದುಕುಳಿದ ಕೆಲವರು ಹೇಳಿದ್ದಾರೆ. ಹೀಗಾಗಿ ಎಷ್ಟು ಜನರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಇರದ ಕಾರಣ ಶೋಧ ಕಾರ್ಯ ಮುಂದುವರಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್‌ಐಟಿ ರಚನೆ
ಮಲಪ್ಪುರ ಜಿಲ್ಲೆಯ ತೂವಲ್‌ಬೀಚ್‌ ಬಳಿ ಸಂಭವಿಸಿದ ದೋಣಿ ದುರಂತ ಕುರಿತು ತನಿಖೆ ನಡೆಸಲು ಕೇರಳ ಪೊಲೀಸ್‌ ಇಲಾಖೆ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ಮಂಗಳವಾರ ರಚಿಸಿದೆ. ‘ಡಿಜಿಪಿ ಅನಿಲ್‌ ಕಾಂತ್‌ ಅವರು ಮಲಪ್ಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಜಿತ್‌ ದಾಸ್‌ ಎಸ್‌. ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ’ ಇಲಾಖೆಯ ಪ್ರಕಟಣೆ ತಿಳಿಸಿದೆ. ಡಿವೈಎಸ್‌ಪಿ ವಿ.ವಿ.ಬೆನ್ನಿ ತಾನೂರ್ ಪೊಲೀಸ್‌ ಠಾಣಾಧಿಕಾರಿ ಜೀವನ್‌ ಜಾರ್ಜ್ ಎಎಸ್‌ಪಿ ವಿಜಯ್ ಭರತ್‌ ರೆಡ್ಡಿ ಈ ತಂಡದ ಸದಸ್ಯರಾಗಿದ್ದಾರೆ. ಘಟನೆ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.