ಕೊಚ್ಚಿ: ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ವಿಶೇಷ ಪೀಠ ರಚಿಸುವುದಾಗಿ ಕೇರಳ ಹೈಕೋರ್ಟ್ ಗುರುವಾರ ತಿಳಿಸಿದೆ.
ಸಮಿತಿಯ ವರದಿ ಬಿಡುಗಡೆಗೆ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್. ಮನು ಅವರ ಪೀಠವು ಈ ಕುರಿತು ಮೌಖಿಕವಾಗಿ ತಿಳಿಸಿತು.
ವಿಶೇಷ ಪೀಠದಲ್ಲಿ ಮಹಿಳಾ ನ್ಯಾಯಮೂರ್ತಿಯೊಬ್ಬರು ಇರಲಿದ್ದಾರೆ ಎಂದು ಪೀಠ ತಿಳಿಸಿರುವುದಾಗಿ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಸಮಿತಿಯ ವರದಿಯನ್ನು ಸಾರ್ವಜನಿಕರ ಮುಂದಿಡಲು ರಾಜ್ಯ ಮಾಹಿತಿ ಆಯೋಗ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠವು ಆಗಸ್ಟ್ 13ರಂದು ವಜಾಗೊಳಿಸುವ ಮೂಲಕ, ವರದಿ ಬಿಡುಗಡೆಗೆ ಅನುಮತಿಸಿತ್ತು.
ರಾಜ್ಯ ಮಾಹಿತಿ ಆಯೋಗ ಜುಲೈ 5ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿನಿಮಾ ನಿರ್ಮಾಪಕ ಸಾಜಿಮೋನ್ ಪರಾಯಿಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ ವಜಾಗೊಳಿಸಿತ್ತು.
2017ರಲ್ಲಿ ನಟಿಯೊಬ್ಬರ ಮೇಲಿನ ಹಲ್ಲೆ ಪ್ರಕರಣದ ಬಳಿಕ ಕೇರಳ ಸರ್ಕಾರವು, ಮಲಯಾಳಂ ಚಿತ್ರರಂಗದ ನಟಿಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಹೇಮಾ ಸಮಿತಿ ರಚಿಸಿತ್ತು. ಈ ವರದಿ ಬಹಿರಂಗಗೊಂಡ ಬಳಿಕ, ಹಲವು ನಟರು ಮತ್ತು ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಆರೋಪಗಳು ವ್ಯಕ್ತವಾಗಿವೆ. ಈ ಕುರಿತ ತನಿಖೆಗಾಗಿ ಏಳು ಸದಸ್ಯರ ವಿಶೇಷ ತನಿಖಾ ತಂಡ ರಚಿಸುವುದಾಗಿ ಕೇರಳ ಸರ್ಕಾರ ಆಗಸ್ಟ್ 25ರಂದು ಘೋಷಣೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.