ತಿರುವನಂತಪುರ: ಕೇರಳದ ಹಲವು ಜಿಲ್ಲೆಗಳಲ್ಲಿ ಭಾನುವಾರವೂ ಭಾರೀ ಮಳೆ ಮುಂದುವರಿದಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ.
ಉಳಿದ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಲಕ್ಷದ್ವೀಪದಲ್ಲಿಯೂ ಐಎಂಡಿ ಆರೆಂಟ್ ಅಲರ್ಟ್ ಘೋಷಿಸಿದೆ. ಆರೆಂಜ್ ಅಲರ್ಟ್ 24 ಗಂಟೆಗಳಲ್ಲಿ 11 ರಿಂದ 20 ಸೆಂ.ಮೀ.ಗಳವರೆಗೆ ಭಾರೀ ಮಳೆಯಾಗುವುದನ್ನು ಸೂಚಿಸುತ್ತದೆ. ಯೆಲ್ಲೋ ಅಲರ್ಟ್ 6 ರಿಂದ 11 ಸೆಂ.ಮೀ.ಗಳವರೆಗೆ ಭಾರೀ ಮಳೆ ಎಂದು ಸೂಚಿಸುತ್ತದೆ.
ಇಡುಕ್ಕಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದ್ದು, ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಹಲವು ಭಾಗಗಳಿಂದ ಪ್ರವಾಹ ಮತ್ತು ಮಣ್ಣು ಕುಸಿತದ ವರದಿಯಾಗಿದೆ.
ನೆಡುಂಕಂಡಂ, ಕುಮಿಲಿ ಮತ್ತು ಕಟ್ಟಪ್ಪಣ ಪ್ರದೇಶಗಳಲ್ಲಿ ಪ್ರವಾಹ ವರದಿಯಾಗಿದ್ದು, ಹಲವು ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ. ನಿವಾಸಿಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮುಲ್ಲಪೆರಿಯಾರ್ ಅಣೆಕಟ್ಟೆಯ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ.
ಮುಲ್ಲಪೆರಿಯಾರ್ ಅಣೆಕಟ್ಟೆ
ಅಣೆಕಟ್ಟನ್ನು ನಿರ್ವಹಿಸುವ ತಮಿಳುನಾಡು ಜಲಸಂಪನ್ಮೂಲ ಇಲಾಖೆಯು 13 ಸ್ಪಿಲ್‌ವೇ ಶಟರ್‌ಗಳನ್ನು 100 ಸೆಂ.ಮೀ.ಗಳಷ್ಟು ತೆರೆದಿದೆ.
ಜಿಲ್ಲಾ ಅಧಿಕಾರಿಗಳ ಪ್ರಕಾರ, ಅಣೆಕಟ್ಟಿನಿಂದ 1,400 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಿಲ್ಲೆಯ ಇತರ ಮೂರು ಅಣೆಕಟ್ಟುಗಳಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರ್ನಾಕುಲಂನಲ್ಲಿ, ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಎರ್ನಾಕುಲಂ ಜಂಕ್ಷನ್ ರೈಲ್ವೆ ನಿಲ್ದಾಣದ ಬಳಿ ಪ್ರವಾಹ ಉಂಟಾಗಿದೆ.
ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಥನಂತಿಟ್ಟ, ಕೋಯಿಕ್ಕೋಡ್, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿಯೂ ಹೆಚ್ಚಿನ ಮಳೆಯಾಗಿದೆ.
ಮಲಪ್ಪುರಂನಲ್ಲಿ, ಎತ್ತರದ ಪ್ರದೇಶಗಳಲ್ಲಿನ ಕೃಷಿ ಭೂಮಿಗೆ ಪ್ರವಾಹದ ನೀರು ನುಗ್ಗಿ ಬೆಳೆ ನಷ್ಟವಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 22ರವರೆಗೆ ಹವಾಮಾನ ವೈಪರೀತ್ಯ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.