ಪ್ರಾತಿನಿಧಿಕ ಚಿತ್ರ
ಕೊಚ್ಚಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಬಳಕೆಯ ಮೇಲೆ ನಿಯಂತ್ರಣ ಹೇರುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಕೇರಳ ಹೈಕೋರ್ಟ್ ಹೊರತಂದಿದ್ದು, ಜಿಲ್ಲಾ ನ್ಯಾಯಾಲಯಗಳು ನಿರ್ಧಾರ ತೆಗೆದುಕೊಳ್ಳುವಾಗ ಅಥವಾ ಕಾನೂನಿನಡಿ ತರ್ಕವನ್ನು ಮಂಡಿಸುವಾಗ ಎ.ಐ ತಂತ್ರಜ್ಞಾನ ಬಳಸುವಂತಿಲ್ಲ ಎಂದು ಹೇಳಿದೆ.
ಎ.ಐ ತಂತ್ರಜ್ಞಾನದ ಹೆಚ್ಚುತ್ತಿರುವ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಈ ತಂತ್ರಜ್ಞಾನದ ಜವಾಬ್ದಾರಿಯುತ ಮತ್ತು ನಿರ್ಬಂಧಿತ ಬಳಕೆಗಾಗಿ, 'ಜಿಲ್ಲಾ ನ್ಯಾಯಾಲಯದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ’ ಹೆಸರಿನ ನೀತಿಯನ್ನು ಬಿಡುಗಡೆ ಮಾಡಿದೆ.
ನ್ಯಾಯಾಲಯದ ಮೂಲಗಳ ಪ್ರಕಾರ, ಜಿಲ್ಲಾ ನ್ಯಾಯಾಲಯಗಳಲ್ಲಿ ಎ.ಐ ಬಳಕೆಗೆ ಸಂಬಂಧಿಸಿದಂತೆ ಇಂತಹ ನೀತಿಯನ್ನು ರೂಪಿಸಿರುವುದು ದೇಶದಲ್ಲಿ ಇದೇ ಮೊದಲು.
ಎ.ಐ ತಂತ್ರಜ್ಞಾನದ ವಿವೇಚನಾರಹಿತ ಬಳಕೆಯು ಗೋಪ್ಯತೆ ಹಕ್ಕುಗಳ ಉಲ್ಲಂಘನೆ, ಡೇಟಾಗಳ ಭದ್ರತೆಗೆ ಅಪಾಯ ಮತ್ತು ನ್ಯಾಯಾಲಯಗಳು ನೀಡುವ ತೀರ್ಪಿನ ಮೇಲೆ ನಂಬಿಕೆ ಕಳೆದುಕೊಳ್ಳುವುದು ಸೇರಿದಂತೆ ಹಲವು ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು. ಆದ್ದರಿಂದ ಜಿಲ್ಲಾ ನ್ಯಾಯಾಲಯಗಳು ಈ ವಿಷಯದಲ್ಲಿ ‘ಅತೀವ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದೆ.
ಯಾವುದೇ ಸಂದರ್ಭಗಳಲ್ಲಿ ಈ ತಂತ್ರಜ್ಞಾನವನ್ನು ಕಾನೂನಿನಡಿ ತರ್ಕವನ್ನು ಮಂಡಿಸುವಾಗ ಬಳಸಲಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನೀತಿಯ ಉದ್ದೇಶ ಎಂದು ತಿಳಿಸಿದೆ.
ಕೃತಕ ಬುದ್ಧಿಮತ್ತೆಯನ್ನು ಕೇವಲ ನೆರವು ಪಡೆಯುವ ಸಾಧನವಾಗಿ ಮತ್ತು ಕಟ್ಟುನಿಟ್ಟಾಗಿ ಅನುಮತಿಸಲಾಗಿರುವ ಉದ್ದೇಶಗಳಿಗೆ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.