ADVERTISEMENT

ಪಿಎಫ್‌ಐ, ಎಸ್‌ಡಿಪಿಐ ಹಿಂಸಾತ್ಮಕ ತೀವ್ರವಾದಿ ಸಂಘಟನೆಗಳು: ಕೇರಳ ಹೈಕೋರ್ಟ್

ಪಿಟಿಐ
Published 14 ಮೇ 2022, 6:27 IST
Last Updated 14 ಮೇ 2022, 6:27 IST
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್   

ಕೊಚ್ಚಿ: ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತೀವ್ರವಾದಿ ಸಂಘಟನೆಗಳು. ಆದರೆ ನಿಷೇಧಿತ ಸಂಘಟನೆಗಳಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

‘ಪಿಎಫ್‌ಐ ಹಾಗೂ ಎಸ್‌ಡಿಪಿಐ ಗಂಭೀರ ಹಿಂಸಾಚಾರದಲ್ಲಿ ತೊಡಗಿರುವ ತೀವ್ರವಾದಿ ಸಂಘಟನೆಗಳು ಎಂಬುದರಲ್ಲಿ ಅನುಮಾನವಿಲ್ಲ. ಅದೇ ರೀತಿ, ಅವುಗಳು ನಿಷೇಧಿತ ಸಂಘಟನೆಗಳಲ್ಲ ಎಂಬುದೂ ನಿಜ’ ಎಂದು ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ಹರಿಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪಾಲಕ್ಕಾಡ್‌ನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಅರ್ಜಿಯ ವಿಚಾರಣೆ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ, ಸಿಬಿಐ ತನಿಖೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಎಸ್‌ಡಿಪಿಐ 2009ರಲ್ಲಿ ಸ್ಥಾಪನೆಯಾದ ರಾಜಕೀಯ ಪಕ್ಷವಾಗಿದ್ದು, ಇದರ ಅಧೀನ ಸಂಘಟನೆಯಾಗಿದೆ ಪಿಎಫ್‌ಐ.

ನ್ಯಾಯಾಲಯದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ, ಅಭಿಪ್ರಾಯವನ್ನು ಕಡತದಿಂದ ತೆಗದುಹಾಕುವಂತೆ ಮನವಿ ಮಾಡುವುದಾಗಿ ತಿಳಿಸಿದೆ.

‘ಇದು ಬಹಳ ಗಂಭೀರವಾದ ಅಭಿಪ್ರಾಯ. ಯಾವುದೇ ಒಂದು ತನಿಖಾ ಸಂಸ್ಥೆ ಈವರೆಗೆ ಎಸ್‌ಡಿಪಿಐ ವಿರುದ್ಧ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಯಾವ ಆಧಾರದಲ್ಲಿ ನ್ಯಾಯಾಲಯ ಅಂಥ ಹೇಳಿಕೆ ನೀಡಿದೆ? ನ್ಯಾಯಾಲಯದ ವಿಶ್ಲೇಷಣೆಗಳು ಸಮಂಜಸವಾಗಿರಬೇಕು. ಆದರೆ ಇಲ್ಲಿ ಆ ರೀತಿ ಕಾಣಿಸುತ್ತಿಲ್ಲ’ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಮೂವಟ್ಟುಪುಳ ಅಶ್ರಫ್ ಮೌಲವಿ ಶುಕ್ರವಾರ ಹೇಳಿದ್ದಾರೆ.

ಎಸ್‌ಡಿಪಿಐ ನಿಲುವನ್ನು ಬೆಂಬಲಿಸಿರುವ ಪಿಎಫ್‌ಐ, ನ್ಯಾಯಾಲಯದ ಅಭಿಪ್ರಾಯ ಸಮರ್ಥನೀಯವಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.