ADVERTISEMENT

ಭ್ರಷ್ಟರ ರಕ್ಷಣೆಗೆ ಒತ್ತಡ: ಸದಾನಂದಗೌಡ ವಿರುದ್ಧ ಐಎಎಸ್‌ ಅಧಿಕಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:51 IST
Last Updated 21 ಜೂನ್ 2019, 19:51 IST
ಡಿ.ವಿ. ಸದಾನಂದಗೌಡ
ಡಿ.ವಿ. ಸದಾನಂದಗೌಡ   

ತಿರುವನಂತಪುರ: ಭ್ರಷ್ಟರ ವಿರುದ್ಧ ಕ್ರಮ ಜರುಗಿಸದಂತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಮ್ಮಮೇಲೆ ಒತ್ತಡ ಹೇರಿದ್ದರು ಎಂದು ಕೇರಳ ಕೇಡರ್‌ನ ಐಎಎಸ್‌ ಅಧಿಕಾರಿ ರಾಜು ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಐಎಎಸ್‌ ಅಧಿಕಾರಿಗಳ ಸಾಧನೆಯನ್ನು ಪರಿಶೀಲಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಕೇರಳ ಸರ್ಕಾರ ರಾಜು ನಾರಾಯಣಸ್ವಾಮಿ ವಿರುದ್ಧ ವ್ಯತಿರಿಕ್ತ ವರದಿ ಸಲ್ಲಿಸಿದೆ. ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಫಾರಸು ಮಾಡಿದೆ ಎನ್ನಲಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ರಾಜ್ಯ ಸರ್ಕಾರದ ಈ ಕ್ರಮದ ಬಗ್ಗೆ ನನಗೆ ಅಧಿಕೃತ ಮಾಹಿತಿ ಇಲ್ಲ. ಇದು ನಿಜವೇ ಆಗಿದ್ದರೆ ಅದು ನೋವಿನ ಸಂಗತಿ. ಇಂತಹ ನಡೆ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ’ ಹೇಳಿದ್ದಾರೆ.

ADVERTISEMENT

‘ಕರ್ನಾಟಕದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ, ಮಂಡ್ಯದಲ್ಲಿರುವ ಮಂಡಳಿಯ ತೋಟದಲ್ಲಿ ಸಾಗುವಾನಿ ಮರಗಳನ್ನು ಕಡಿದು, ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನು ನಾನು ಭೇದಿಸಿದ್ದೆ. ನನ್ನ ವಿರುದ್ಧದ ಕ್ರಮಕ್ಕೆ ಇದೇ ಪ್ರಮುಖ ಕಾರಣ’ ಎಂದು ನಾರಾಯಣಸ್ವಾಮಿ ಅವರು ಕೊಚ್ಚಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

‘ಮಂಡ್ಯದಲ್ಲಿರುವ ತೋಟದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಕಡಿದು, ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದೆ. ಸಿಬಿಐ ವರದಿಯಂತೆ ತನಿಖೆ ನಡೆಸಿ, ಚಾರ್ಚ್‌ಶೀಟ್‌ ಸಹ ಸಲ್ಲಿಸಿದ್ದೆ. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಕೇಂದ್ರ ಸಚಿವ ಸದಾನಂದಗೌಡ ನನಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದರು’ ಎಂದೂ ಆರೋಪಿಸಿದ್ದಾರೆ. ‘ಚಾರ್ಜ್‌ಶೀಟ್‌ ಹಿಂಪಡೆಯಬೇಕು. ಹೇಮಚಂದ್ರ ಎಂಬ ಅಧಿಕಾರಿಯ ಅಮಾನತು ತೆರವುಗೊಳಿಸುವಂತೆ ಅವರು ಮಾಡಿದ್ದ ಕೋರಿಕೆಯನ್ನು ನಾನು ತಿರಸ್ಕರಿಸಿದ್ದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.