ADVERTISEMENT

Wayanad Landslide: ಸೂತಕದೂರಿನ ಸಂಕಟ ಕಥನಗಳು

ಪಿಟಿಐ
Published 31 ಜುಲೈ 2024, 15:59 IST
Last Updated 31 ಜುಲೈ 2024, 15:59 IST
<div class="paragraphs"><p>ವಯನಾಡ್ ದುರಂತದ ದೃಶ್ಯಗಳು</p></div>

ವಯನಾಡ್ ದುರಂತದ ದೃಶ್ಯಗಳು

   

– ಪಿಟಿಐ ಚಿತ್ರ

ವಯನಾಡ್‌: ಅಳಿದು ಉಳಿದ ಮನೆಗಳ ತುಂಬೆಲ್ಲಾ ಕೆಸರು. ಗೋಡೆಯ ಮೇಲೆ ಕೆಟ್ಟು ನಿಂತ ಗಡಿಯಾರ, ದುರಂತ ಎರಗಿದ ಸಮಯವನ್ನು ದಾಖಲಿಸಿತ್ತು. ಮನೆಯಂಗಳದಲ್ಲಿ ಬಿದ್ದಿರುವ ತುಂಬು ಕುಟುಂಬದ ಫೋಟೊ, ಆ ಫೋಟೊದಲ್ಲಿ ಇರುವವರು ಮನೆಯಲ್ಲಿಲ್ಲ. ಎಲ್ಲವನ್ನೂ ಆಪೋಶನ ತೆಗೆದುಕೊಂಡ ಕಲ್ಲು–ಕೆಸರಿನ ರಾಶಿಯಿಂದಾಗಿ ತಪ್ಪಿಸಿಕೊಳ್ಳಲಾಗದೆ ಅಪ್ಪಿಕೊಂಡೇ ಸತ್ತ ಕುಟುಂಬದವರು. ಕೂತವರು ಕೂತಲ್ಲೇ, ಮಲಗಿದವರು ಮಲಗಿದಲ್ಲೇ ಪ್ರಾಣ ಕಳೆದುಕೊಂಡಿದ್ದು... 

ADVERTISEMENT

ಗುಡ್ಡಕುಸಿತ ಮತ್ತು ಅದನ್ನು ಹಿಂಬಾಲಿಸಿದ ದಿಢೀರ್ ಕೆಸರು ಪ್ರವಾಹದಲ್ಲಿ ಕೊಚ್ಚಿಹೋದ ವಯನಾಡಿನ ಮುಂಡಕ್ಕೈ ಮತ್ತು ಚೂರಲ್‌ಮಲದ ಎಲ್ಲೆಡೆ ಕಾಣಸಿಗುವ ದೃಶ್ಯಗಳಿವು. ಸಂತ್ರಸ್ತರು, ರಕ್ಷಣಾ ಸಿಬ್ಬಂದಿ ಭೂಕುಸಿತದ ಭೀಕರತೆಯನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ.

‘ರಾತ್ರಿ 1.30ರ ವೇಳೆಗೆ ದೊಡ್ಡ ಶಬ್ದ ಕೇಳಿಸಿತು. ಎದ್ದು ಹೊರಬಂದು ನೋಡಿದರೆ, ಪ್ರವಾಹದ ನೀರು ಮನೆಯ ಮುಂದೆಯೇ ಹರಿಯುತ್ತಿತ್ತು. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರು ಸಹಾಯಕ್ಕಾಗಿ ಕಿರುಚುತ್ತಿದ್ದರು, ಕೈ ಮೇಲೆ ಎತ್ತುತ್ತಿದ್ದರು. ಆದರೆ, ಪ್ರವಾಹದ ರಭಸ ಎಷ್ಟಿತ್ತೆಂದರೆ, ನೋಡ ನೋಡುತ್ತಲೇ ಎಲ್ಲವೂ ನಡೆದೇಹೋಯಿತು. ಎಲ್ಲವೂ ನಿಂತಿತು ಎಂದು ಭಾವಿಸಿ ಮತ್ತೆ ಮಲಗಿದೆವು. ನಾವಿರುವುದು ಚೂರಲ್‌ಮಲದಲ್ಲಿ. ಮತ್ತೆ ಸುಮಾರು 3.30ಕ್ಕೆ ನಮ್ಮ ಹತ್ತಿರವೇ ಏನೋ ಒಂದು ಶಬ್ದವಾದಂತೆ ಕೇಳಿಸಿತು. ಇನ್ನಷ್ಟು ಜನರು ಕೊಚ್ಚಿ ಹೋಗುತ್ತಿದ್ದರು; ಜೊತೆಗೆ ಮೃತದೇಹಗಳೂ. ನಾವು ಹೇಗೋ ಬದುಕುಳಿದೆವು’ ಎಂದು ತಮ್ಮ ಭೀಕರ ಅನುಭವವನ್ನು ಬಿಚ್ಚಿಟ್ಟರು ಕಾರ್ಮಿಕ ಜಯನ್‌.

‘ನನ್ನ ಹೆಂಡತಿ ಕಡೆಯ ಕುಟುಂಬದ 11 ಮಂದಿ ಕಾಣೆಯಾಗಿದ್ದಾರೆ. ಮುಂಡಕ್ಕೈನಲ್ಲಿ ಅವರ ಮನೆಗಳಿದ್ದವು. ಅವರ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ ಎಂದು ನಾನೀಗ ಇಲ್ಲಿಯೇ ನಿಂತು ಕಾಯುತ್ತಿದ್ದೇನೆ’ ಎನ್ನುತ್ತಾರೆ ಜಯನ್‌. ಇವರ ರೀತಿಯಲ್ಲಿಯೇ ಹಲವರು ತಮ್ಮ ಆಪ್ತರ ಕುರಿತು ಮಾಹಿತಿ ತಿಳಿದುಕೊಳ್ಳಲು ಕಾಯುತ್ತಿದ್ದಾರೆ.

ಬದುಕುಳಿದವರ ಕಥೆ... ಕೆಸರಿನಲ್ಲಿ ಸಿಲುಕಿಕೊಂಡವರ ಕಥೆಯೇ ಬೇರೆ.  ‘ಜನರ ಅಳು, ಸಹಾಯಕ್ಕಾಗಿ ಕೈ ಚಾಚುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿದೆ. ಅವರ ಪ್ರೀತಿಪಾತ್ರರ ಜೀವಗಳು ಅವರ ಕಣ್ಣ ಮುಂದೆಯೇ ಹೋಗಿವೆ. ಕೆಸರಲ್ಲಿ ಸಿಲುಕಿರುವ ಕೆಲವರು ತಮ್ಮ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿದ್ದರು’ ಎನ್ನುತ್ತಾರೆ ರಕ್ಷಣಾ ಸಿಬ್ಬಂದಿ. ಗುಡ್ಡ ಕುಸಿತದ ಶಬ್ದ ಕೇಳಿಸಿಕೊಂಡವರು ಜೀವ ಉಳಿಸಿಕೊಳ್ಳಲು ಮನೆಮಂದಿಯನ್ನು ಕಟ್ಟಿಕೊಂಡು ಮನೆಯಿಂದ ದೂರ ಓಡಿಬಂದಿದ್ದಾರೆ. ಕೆಲವರಿಗೆ ಇದು ಸಾಧ್ಯವಾಗಿಲ್ಲ. ‘ನನ್ನ ಅಪ್ಪನನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ನಾನು ಅವರನ್ನು ಎತ್ತಿಕೊಂಡು ಕಾಡಿನ ಕಡೆಗೆ ಓಡಿದೆ. ಆದರೆ ತಂಗಿಯನ್ನು ರಕ್ಷಿಸಲಾಗಲಿಲ್ಲ. ಮನೆಯಿಂದ ಹೊರಗೆ ಓಡಿದ ನಮ್ಮಿಬ್ಬರು ಮಕ್ಕಳನ್ನು ನೀರು ಕೊಚ್ಚಿಕೊಂಡು ಹೋಯಿತು. ಆವರು ಕೂಗುತ್ತಲೇ ಇದ್ದರು, ನಾನು ಅಸಹಾಯಕನಾಗಿದ್ದೆ’ ಎಂದು ಗದ್ಗದಿತರಾದರು ಚೂರಲ್‌ಮಲದ ಪ್ರಸನ್ನ.

****

*‘ಭೂಕುಸಿತದ ಭೀಕರತೆಯನ್ನು ಕಣ್ಣಾರೆ ಕಂಡ ಪುಟ್ಟ ಪುಟ್ಟ ಮಕ್ಕಳಿಗೆ ಈಗ ನಿದ್ದೆಯೇ ಬರುತ್ತಿಲ್ಲ. ಕೆಲವು ಗಂಟೆಗಳ ಮಟ್ಟಿಗೆ ಮಲಗಿದರೂ ಭಯದಿಂದ ಬೆಚ್ಚಿ ಎದ್ದು ಕೂರುತ್ತಿದ್ದಾರೆ’ ಎನ್ನುತ್ತಿದ್ದಾರೆ ನಿರಾಶ್ರಿತ ಶಿಬಿರಗಳಲ್ಲಿರುವ ಪೋಷಕರು

*ಮೊದಲ ಬಾರಿಗೆ ಭೂಕುಸಿತ ಸಂಭವಿಸಿದಾಗ ಕೆಲವರು ಬದುಕುಳಿದು, ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದರು. ಆದರೆ, ಪ್ರವಾಹದ ತೀವ್ರತೆಗೆ ಅವರು ಅದರಲ್ಲಿಯೇ ಕೊಚ್ಚಿಹೋದರು. ಅವರ ದೇಹದ ಭಾಗಗಳು ಈಗ ಸಿಗುತ್ತಿವೆ. ಕೆಲವರ ಕಾಲು, ಕೆಲವರ ಕೈ...’ ಎನ್ನುತ್ತಾರೆ ಅರುಣ್‌ ದೇವ್‌. ವೈದ್ಯಕೀಯ ನೆರವು ನೀಡುತ್ತಿರುವ ತಂಡದೊಂದಿಗೆ ಅರುಣ್‌ ಕೆಲಸ ಮಾಡುತ್ತಿದ್ದಾರೆ

*ಮೃತರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದುಕೊಂಡವರ ಹೆಸರು ಕೂಗುತ್ತಾ, ಅಳುತ್ತಾ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ

*ಗಾಯಾಳುಗಳ ತುರ್ತು ಚಿಕಿತ್ಸೆಗೆ ಆಮ್ಲಜನಕ ಸೌಲಭ್ಯವುಳ್ಳ ಆಂಬುಲೆನ್ಸ್‌ ಸೇರಿ ವೈದ್ಯಕೀಯ ಕೇಂದ್ರ ಮತ್ತು ಕಂಟ್ರೋಲ್‌ ರೂಂ ಅನ್ನು ಚೂರಲ್‌ ಮಲದಲ್ಲಿ ಸ್ಥಾಪಿಸಲು ಕೇರಳ ನಿರ್ಧರಿಸಿದೆ.

ವಿದ್ಯಾರ್ಥಿಗಳ ಸೇವೆ

‘ಇವರೆಲ್ಲಾ ನಮ್ಮ ಜೊತೆಯೇ ಇದ್ದವರು. ಇಲ್ಲಿ ನಮ್ಮ ಸ್ನೇಹಿತರಿದ್ದಾರೆ, ಅವರ ಕುಟುಂಬಗಳು ಇವೆ. ನಮ್ಮ ಕೈಯಲ್ಲಿ ದೊಡ್ಡ ದೊಡ್ಡ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಅವರಿಗಾಗಿ ನಮ್ಮ ಕೈಲಾದ ಸಣ್ಣ ಸಹಾಯ ಮಾಡುತ್ತಿದ್ದೇವೆ’ ಎನ್ನುತ್ತಾ ಮೇಪ್ಪಾಡಿಯ ಸರ್ಕಾರಿ ಶಾಲೆಯಾದ ಜಿಎಚ್‌ಎಸ್‌ಎಸ್‌ ಪ್ರೌಢಶಾಲೆಯ ಮಕ್ಕಳು ನಿರಾಶ್ರಿತರಿಗಾಗಿ ವಿವಿಧೆಡೆಯಿಂದ ಬಂದಿದ್ದ ಬಟ್ಟೆಗಳನ್ನು ಜೋಡಿಸಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.