AI image
ಕೋಯಿಕ್ಕೋಡ್: 37 ವರ್ಷಗಳ ಹಿಂದೆ ಮಾಡಿದ್ದ ಎರಡು ಕೊಲೆಗಳ ಬಗ್ಗೆ ಪ್ರಾಯಶ್ಚಿತ್ತಕ್ಕಾಗಿ ವ್ಯಕ್ತಿಯೊಬ್ಬ ಪೊಲೀಸರ ಬಳಿ ಬಂದು ಸತ್ಯ ಹೇಳಿ ತಪ್ಪೊಪ್ಪಿಕೊಂಡಿರುವ ಘಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಯಿಕ್ಕೋಡ್ ಜಿಲ್ಲಾ ಪೊಲೀಸರು ಮಹಮ್ಮದ್ ಅಲಿ ಎಂಬ 50 ವರ್ಷದ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
1989 ರಲ್ಲಿ ತಿರುವಂಬಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೆರೆಯ ದಡದಲ್ಲಿ ಪೊಲೀಸರಿಗೆ ಸಿಕ್ಕಿತ್ತು. ಶವ ಗುರುತಿಸಲು ಯಾರೂ ಮುಂದೆ ಬಂದಿರಲಿಲ್ಲ. ಕೆಲ ವರ್ಷಗಳ ಬಳಿಕ ಇದು ಸಹಜ ಸಾವು. ಸತ್ತ ವ್ಯಕ್ತಿಗೆ ಮೂರ್ಚೆ ರೋಗ ಇತ್ತು ಎಂದು ಪೊಲೀಸರು ಪ್ರಕರಣ ಅಂತ್ಯಗೊಳಿಸಿದ್ದರು
ಕಳೆದ ಜೂನ್ 30 ರಂದು ಎಸ್‌ಪಿ ಕಚೇರಿಗೆ ತೆರಳಿದ್ದ ಮಹಮ್ಮದ್ ಅಲಿ, 1989 ರಲ್ಲಿ ತಿರುವಂಬಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆರೆಯ ದಡದಲ್ಲಿ ಸತ್ತು ಬಿದ್ದಿದ್ದ ವ್ಯಕ್ತಿಯನ್ನು ನಾನೇ ಕೊಂದಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ. ನಾನು 14 ವರ್ಷದವನಿದ್ದಾಗ ಅಂದು ನಾನು ಮನೆಯ ಕಡೆಗೆ ನಡೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿ ವಿನಾಕಾರಣ ನನ್ನ ಬಳಿ ಜಗಳ ತೆಗೆದಿದ್ದ. ನಾನು ಆತನಿಗೆ ಥಳಿಸಿ ಕಾಲಿನಿಂದ ಜೋರಾಗಿ ಮುಖಕ್ಕೆ ಒದ್ದಿದ್ದೆ. ಆತ ಕೆರೆಯ ಬಳಿ ಬಿದ್ದಿದ್ದ. ಮಾರನೇ ದಿನ ಬಂದು ನೋಡಿದಾಗ ಆತ ಅಲ್ಲಿಯೇ ಮೃತಪಟ್ಟಿದ್ದು ಗೊತ್ತಾಗಿತ್ತು. ಆಮೇಲೆ ಪೊಲೀಸರಿಗೆ ಹೆದರಿ ಸುಮ್ಮನಾಗಿದ್ದೆ ಎಂದು ಮಹಮ್ಮದ್ ಅಲಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಮಹಮ್ಮದ್ ಅಲಿಯ ಈ ವಿಚಿತ್ರ ಪ್ರಕರಣವನ್ನು ಪೊಲೀಸರು ಪರಿಶೀಲಿಸಿದಾಗ ಆತನ ಹೇಳಿಕೆಗೂ ಕ್ರೈಂ ಫೈಲ್‌ಗಳಿಗೂ ತಾಳೆ ಆಗಿರುವುದರಿಂದ ಆತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ವಿಚಿತ್ರ ಎಂದರೆ ಮೊಹಮ್ಮದ್ ಅಲಿ ಮೂರು ದಿನ ಬಿಟ್ಟು 1989 ರಲ್ಲಿ ನಡಕ್ಕಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇನ್ನೂ ಒಂದು ಕೊಲೆ ಮಾಡಿದ್ದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಪೊಲೀಸರು ಸಿಟ್ಟಾಗಿ ‘ಏನಪ್ಪ ನಿನ್ನ ಕಥೆ?’ ಎಂದು ಕೇಳಿದಾಗ, ಆತ, ‘ನಾನು ಕೊಲೆಗಳನ್ನು ಮಾಡಿರುವುದು ನಿಜ. ಪ್ರಾಯಶ್ಚಿತ್ತಕ್ಕಾಗಿ ನಾನು ತಪ್ಪನ್ನು ಒಪ್ಪಿಕೊಂಡಿದ್ದೇನೆ. ನನಗೆ ಶಿಕ್ಷೆ ಆಗಬೇಕು. ಏಕೆಂದರೆ ಏಕೆಂದರೆ ನನ್ನ ಈ ಕೃತ್ಯಗಳು ತಲೆಯಲ್ಲಿ ಕೊರೆಯುತ್ತಿತ್ತು. ಅಷ್ಟೇ ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ನನ್ನ ಹಿರಿಯ ಮಗ ಸಾವನ್ನಪ್ಪಿದ. ಕಿರಿಯ ಮಗ ಅಪಘಾತದಲ್ಲಿ ಕಾಲು ಕಳೆದುಕೊಂಡು ಮನೆ ಸೇರಿದ. ಮನೆಯಲ್ಲಿ ಒಬ್ಬರಲ್ಲ ಒಬ್ಬರಿಗೆ ತೊಂದರೆಗಳು ಕಾಡುತ್ತಿವೆ. ಹೀಗಾಗಿ ನಾನು ಪ್ರಾಯಶ್ಚಿತಕ್ಕಾಗಿ ಪೊಲೀಸರ ಮುಂದೆ ಬಂದಿದ್ದೇನೆ’ ಎಂದು ಹೇಳಿರುವುದು ಪೊಲೀಸರಿಗೇ ಆಶ್ಚರ್ಯ ಮೂಡಿಸಿದೆ.
ಮೊಹಮ್ಮದ್ ಅಲಿಯ ಬಗ್ಗೆ ತಲೆ ಕೆಡಿಸಿಕೊಂಡಿರುವ ಪೊಲೀಸರು ಆತ ಹೇಳಿದ ಎರಡನೇ ಕೊಲೆಯ ಬಗ್ಗೆ ತನಿಖೆ ಮಾಡಿದಾಗ ಯಾವುದೇ ಕ್ರೈಂ ಫೈಲ್‌ಗಳು ಸಿಕ್ಕಿಲ್ಲ. ಆದರೆ, ಅಂದಿನ (1986 ಡಿಸೆಂಬರ್ 5) ಕೆಲ ಪತ್ರಿಕೆಗಳನ್ನು ಪೊಲೀಸರು ತಡಕಾಡಿದಾಗ ‘ಕೂಡರಂಜಿ: ಮಿಷನ್ ಆಸ್ಪತ್ರೆಯ ಹಿಂಭಾಗದ ಸಣ್ಣ ಹೊಳೆಯಲ್ಲಿ ಅಂದಾಜು 20 ವರ್ಷದ ಯುವಕನ ಶವ ಪತ್ತೆ’ ಎಂದು ಪತ್ರಿಕೆ ತುಣಕು ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮೊಹಮ್ಮದ್ ಅಲಿಯ ಮಾನಸಿಕ ಸ್ಥಿತಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಕೋಯಿಕ್ಕೋಡ್ ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.