ADVERTISEMENT

ಲೂಟಿ ಮಾಡಲು ನೆರವಾಗುವಂತೆ ಸಂವಿಧಾನ ಬರೆಯಲಾಗಿದೆ ಎಂದಿದ್ದ ಕೇರಳದ ಸಚಿವ ರಾಜೀನಾಮೆ

ಪಿಟಿಐ
Published 6 ಜುಲೈ 2022, 14:18 IST
Last Updated 6 ಜುಲೈ 2022, 14:18 IST
ಕೇರಳ ಸಚಿವ ಸಜಿ ಚೆರಿಯನ್
ಕೇರಳ ಸಚಿವ ಸಜಿ ಚೆರಿಯನ್   

ತಿರುವನಂತಪುರ: ದೇಶದ ಜನರನ್ನು ಲೂಟಿ ಮಾಡಲು ನೆರವಾಗುವ ರೀತಿಯಲ್ಲಿ ಸಂವಿಧಾನವನ್ನು ಬರೆಯಲಾಗಿದೆ ಎಂದು ಹೇಳಿಕೆ ನೀಡಿದ್ದ ಕೇರಳದ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವ ಸಾಜಿ ಚೆರಿಯನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

‘ನಮ್ಮ ಸಂವಿಧಾನವು ಶೋಷಣೆ ಬಗ್ಗೆ ಗಮನ ಹರಿಸುವುದಿಲ್ಲ. ಅಲ್ಲದೇ, ದೇಶದ ಜನರನ್ನು ಲೂಟಿ ಮಾಡಲು ನೆರವಾಗುವ ರೀತಿಯಲ್ಲಿ ಅದನ್ನು ಬರೆಯಲಾಗಿದೆ’ ಎಂದು ಅವರು ಹೇಳಿದ್ದರು.

ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿ ಎಂಬಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘ಅದ್ಭುತವಾಗಿ ರಚಿಸಲಾದ ಸಂವಿಧಾನವನ್ನು ಭಾರತ ಹೊಂದಿದೆ ಎಂದು ನಾವು ಹೇಳುತ್ತೇವೆ. ಆದರೆ, ನನ್ನ ಪ್ರಕಾರ, ಅದ್ಭುತವಾದ ಈ ಸಂವಿಧಾನ ದೇಶದ ಬಹು ಜನರನ್ನು ಲೂಟಿ ಮಾಡಲು ನೆರವಾಗುವಂತಿದೆ’ ಎಂದು ಹೇಳಿದ್ದರು.

ADVERTISEMENT

ಈ ಬಗ್ಗೆ ಪ್ರತಿಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಾದ ಒತ್ತಡಕ್ಕೆ ಮಣಿದಿರುವ ಸಚಿವ ಸಜಿ ಚೆರಿಯನ್, ಮುಖ್ಯಮಂತ್ರಿ ಕಚೇರಿ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಪಿಣರಾಯಿ ವಿಜಯನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತಿರುವುದಾಗಿ ಘೋಷಿಸಿದರು.

ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿಯ ಎಲ್‌ಡಿಎಫ್ ಸರ್ಕಾರಕ್ಕೆ ರಾಜೀನಾಮೆ ಕೊಟ್ಟ ಮೊದಲ ಸಚಿವರು ಎಂಬ ಅಪಖ್ಯಾತಿಗೂ ಚೆರಿಯನ್ ಪಾತ್ರರಾಗಿದ್ದಾರೆ.

ರಾಜೀನಾಮೆಯು ನನ್ನ ಸ್ವತಂತ್ರ ನಿರ್ಧಾರವಾಗಿದ್ದು, ಸಂವಿಧಾನವನ್ನು ಅವಮಾನಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ಅದರ ಬಗ್ಗೆ ನನಗೆ ಅತ್ಯಂತ ಗೌರವವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನನ್ನ ಹೇ:ಳಿಕೆಯನ್ನು ಸುದ್ದಿ ವಾಹಿನಿಗಳಲ್ಲಿ ತಪ್ಪಾಗಿ ಪ್ರಸಾರ ಮಾಡಲಾಯಿತು. ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಇದರಲ್ಲಿದೆ ಎಂದು ನಾನು ನಂಬಿದ್ದೇನೆ. ಹಲವು ಬಾರಿ ಸಂವಿಧಾನದ ಸಾರ್ವಭೌಮತ್ವ ಕಾಪಾಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿಫಲವಾಗಿವೆ ಎಂದೂ ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.