ADVERTISEMENT

‘ಸುಪ್ರೀಂ’ಗೆ ಕೇರಳ ದೂರು

ರಾಜ್ಯ–ಕೇಂದ್ರ ವಿವಾದ ಪರಿಹಾರ ವಿಧಿ ಅಡಿ ಸಿಎಎ ವಿರುದ್ಧ ಅರ್ಜಿ ಸಲ್ಲಿಸಿದ ಎಡರಂಗ ಸರ್ಕಾರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 19:37 IST
Last Updated 14 ಜನವರಿ 2020, 19:37 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ನವದೆಹಲಿ:ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಸಿಂಧುತ್ವವನ್ನು ಪ್ರಶ್ನಿಸಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸಂವಿಧಾನದ 256ನೇ ವಿಧಿಯ ಅಡಿಯಲ್ಲಿ, ಈ ಕಾಯ್ದೆ, ಅದರ ನಿಯಮಗಳು ಮತ್ತು ಆದೇಶಗಳನ್ನು ರಾಜ್ಯ ಸರ್ಕಾರವು ಪಾಲಿಸಲೇಬೇಕಾಗುತ್ತದೆ. ಆದರೆ, ಕಾಯ್ದೆಯು ಅತಾರ್ಕಿಕವಾಗಿದೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೇರಳ ವಾದಿಸಿದೆ.

ರಾಜ್ಯ ವಿಧಾನಸಭೆಯು ಈ ಕಾಯ್ದೆಯ ವಿರುದ್ಧ ನಿರ್ಣಯವನ್ನು ಕೆಲ ದಿನಗಳ ಹಿಂದೆ ಅಂಗೀಕರಿಸಿತ್ತು. ಈಗ, 131ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದೆ. ರಾಜ್ಯಗಳ ನಡುವೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವಣ ವಿವಾದಗಳ ಸಂದರ್ಭದಲ್ಲಿ ಈ ವಿಧಿಯ ಅಡಿಯಲ್ಲಿ ದೂರು ಸಲ್ಲಿಸಲು ಅವಕಾಶ ಇದೆ.

ಸಂವಿಧಾನವು ಹೇಳುವ ಜಾತ್ಯತೀತ ತತ್ವವನ್ನೇ ಈ ಕಾಯ್ದೆಯು ಉಲ್ಲಂಘಿಸುತ್ತದೆ ಎಂದು ಕೇರಳ ವಾದಿಸಿದೆ. ಈ ಕಾಯ್ದೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ ಮೊದಲ ರಾಜ್ಯ ಕೇರಳ. ವ್ಯಕ್ತಿಗಳು ಮತ್ತು ಸಂಘಟನೆಗಳಿಂದ ಸುಪ್ರೀಂ ಕೋರ್ಟ್‌ಗೆ ಸಿಎಎ ವಿರುದ್ಧ 60ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.‌

ADVERTISEMENT

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ನೆಲೆಯಲ್ಲಿ ಕಿರುಕುಳಕ್ಕೆ ಒಳಗಾಗುವ ಮುಸ್ಲಿಮೇತರರಿಗೆ ಪೌರತ್ವ ನೀಡುವುದಕ್ಕಾಗಿ ಸಿಎಎ ರೂಪಿಸಲಾಗಿದೆ.

‘ಪ್ರತಿಭಟನೆ ಸಾಂವಿಧಾನಿಕ ಹಕ್ಕು’

ಸಂಸತ್ತಿನಲ್ಲಿ ಏನು ಹೇಳಬೇಕಿತ್ತೋ ಅದನ್ನು ಹೇಳದ ಕಾರಣಕ್ಕೆ ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನೆ ನಡೆಸುವುದು ಜನರ ಸಾಂವಿಧಾನಿಕ ಹಕ್ಕು ಎಂದು ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶೆ ಕಾಮಿನಿ ಲಾವೂ ಮಂಗಳವಾರ ಹೇಳಿದ್ದಾರೆ. ಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಅವರು, ಸಾಕ್ಷ್ಯ ಸಲ್ಲಿಸಲು ವಿಫಲರಾದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ವಿರುದ್ಧದ ಪ್ರತಿಭಟನೆ ಸಂಬಂಧ ಆಜಾದ್‌ ಅವರನ್ನು ದೆಹಲಿಯ ದರಿಯಾಗಂಜ್‌ ಪ್ರದೇಶದಿಂದ ಬಂಧಿಸಲಾಗಿತ್ತು. ಜಾಮಾ ಮಸೀದಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಅವರ ಮೇಲೆ ಇದೆ.

ಜಾಮಾ ಮಸೀದಿಯಲ್ಲಿ ಆಜಾದ್‌ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡುವಂತೆ ಮತ್ತು ಜಾಮಾ ಮಸೀದಿಯಲ್ಲಿ ಜನ ಸೇರುವುದನ್ನು ನಿಷೇಧಿಸುವ ಕಾನೂನು ಯಾವುದಿದೆ ಎಂಬುದನ್ನು ತೋರಿಸುವಂತೆ ತನಿಖಾಧಿಕಾರಿಗೆ ನ್ಯಾಯಾಧೀಶೆ ಸೂಚಿಸಿದರು.

ಜಾಮಾ ಮಸೀದಿಯು ಪಾಕಿಸ್ತಾನದಲ್ಲಿ ಇದೆ ಎಂಬಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಒಂದು ವೇಳೆ ಅದು ಪಾಕಿಸ್ತಾನದಲ್ಲಿ ಇದೆ ಎಂದಾದರೂ ಶಾಂತಿಯುತವಾಗಿ ಪ್ರತಿಭಟಿಸುವುದಕ್ಕೆ ಅವಕಾಶ ಇದೆ. ಪಾಕಿಸ್ತಾನವುಒಂದು ಕಾಲದಲ್ಲಿ ಅವಿಭಜಿತ ಭಾರತದ ಭಾಗವೇ ಆಗಿತ್ತು ಎಂದು ಅವರು ಹೇಳಿದರು.

ಬೇಸರ ವ್ಯಕ್ತಪಡಿಸಿದ ನಾದೆಲ್ಲ

‘ಭಾರತದಲ್ಲಿ ಏನು ನಡೆಯುತ್ತಿದೆಯೋ ಆ ಬಗ್ಗೆ ನನಗೆ ಬೇಸರವಿದೆ. ಬಾಂಗ್ಲಾದೇಶದ ವಲಸಿಗರೊಬ್ಬರು ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಯ ನಾಯಕತ್ವ ವಹಿಸಿ, ದೇಶದ ಆರ್ಥಿಕತೆಗೆ ಕೊಡುಗೆ ನೀಡುವುದನ್ನು ನೋಡಲು ನಾನು ಬಯಸುತ್ತೇನೆ’ ಎಂದು ಮೈಕ್ರೊಸಾಫ್ಟ್‌ ಸಂಸ್ಥೆಯ ಸಿಇಒ ಸತ್ಯ ನಾದೆಲ್ಲ ಹೇಳಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ನೀಡಿದ ಇನ್ನೊಂದು ಹೇಳಿಕೆಯಲ್ಲಿ, ‘ಪ್ರತಿ ರಾಷ್ಟ್ರವೂ ತನ್ನ ಗಡಿಯನ್ನು ಭದ್ರಪಡಿಸಿಕೊಳ್ಳಬೇಕು ಮತ್ತು ತನ್ನದೇ ಆದ ವಲಸೆ ನೀತಿಯನ್ನು ರೂಪಿಸಬೇಕು’ ಎಂದಿದ್ದಾರೆ.

‘ಅಕ್ಷರಸ್ಥರಿಗೆ ಬೇಕಿದೆ ಶಿಕ್ಷಣ’

‘ಅಕ್ಷರಸ್ಥರಿಗೆ ಶಿಕ್ಷಣ ನೀಡಬೇಕಾದದ್ದು ಎಷ್ಟು ಅಗತ್ಯ ಎಂಬುದನ್ನು ಈ ಹೇಳಿಕೆ ಸ್ಪಷ್ಟಪಡಿಸುತ್ತದೆ’ ಎಂದು ಬಿಜೆಪಿಯ ವಕ್ತಾರೆ ಮೀನಾಕ್ಷಿ ಲೇಖಿ ಟ್ವೀಟ್‌ ಮೂಲಕ ನಾದೆಲ್ಲ ಅವರನ್ನು ಟೀಕಿಸಿದ್ದಾರೆ.

‘ನಮ್ಮವರೇ ಹೇಳಬೇಕಿತ್ತು’

‘ಏನು ಹೇಳಬೇಕಿತ್ತೊ ಅದನ್ನು ನಾದೆಲ್ಲ ಹೇಳಿದ್ದಾರೆ ಎಂಬುದು ಖುಷಿ ತಂದಿದೆ. ನಮ್ಮವರೇ ಆದ ಮಾಹಿತಿ ತಂತ್ರಜ್ಞಾನ ದಿಗ್ಗಜರು ಅಂಥ ಹೇಳಿಕೆಯನ್ನು ಮೊದಲು ನೀಡುವ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕಾಗಿತ್ತು. ಈಗಲಾದರೂ ಅವರು ಅದನ್ನು ಮಾಡಲಿ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.