ADVERTISEMENT

ಮಸೀದಿಗೆ ಪ್ರವೇಶ ಕೋರಿ ‘ಸುಪ್ರೀಂ’ ಮೊರೆ ಹೋಗಲು ಮುಂದಾದ ಕೇರಳ ಮುಸ್ಲಿಂ ಮಹಿಳೆಯರು

ಪಿಟಿಐ
Published 16 ಅಕ್ಟೋಬರ್ 2018, 10:55 IST
Last Updated 16 ಅಕ್ಟೋಬರ್ 2018, 10:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ದೇಶದ ಎಲ್ಲ ಮಸೀದಿಗಳಲ್ಲೂ ಸ್ತ್ರೀಯರಿಗೆ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಕೇರಳದ ಮುಸ್ಲಿಂ ಮಹಿಳೆಯರ ಹಕ್ಕುಗಳ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಮುಂದಾಗಿದೆ.

ಶಬರಿಮಲೆ ದೇಗುಲ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅನುಮತಿ ನೀಡಿದ ಬೆನ್ನಲ್ಲೇ, ನಿಸಾ (NISA) ಎಂಬ ಮಹಿಳಾ ಪ್ರಗತಿಪರ ವೇದಿಕೆ ಈ ಕ್ರಮಕ್ಕೆ ಮುಂದಾಗಿದ್ದು, ಶೀಘ್ರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ.

ಈ ವೇದಿಕೆಯು ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅನುಮತಿ ಕೋರುವುದಷ್ಟೇ ಅಲ್ಲದೆ, ಮಹಿಳೆಯರನ್ನು ‘ಇಮಾಮ್‌’ಗಳಾಗಿ ನೇಮಕ ಮಾಡಬೇಕು ಎಂದೂ ಹೋರಾಟ ನಡೆಸುತ್ತಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆ ಮತ್ತೆ ತನ್ನ ಪತಿಯ ಜತೆ ವಾಸ ಮಾಡಬೇಕಾದರೆ ಅದಕ್ಕೂ ಮುನ್ನ ಅನುಸರಿಸುವ ‘ನಿಖಾ ಹಲಾಲ’ ಪದ್ಧತಿ ಮತ್ತು ಬಹುಪತ್ನಿತ್ವದ ವಿರುದ್ಧವೂ ಈ ವೇದಿಕೆ ಹೋರಾಟ ನಡೆಸುತ್ತಿದೆ.

ADVERTISEMENT

ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಪವಿತ್ರ ಕುರಾನ್‌ನಲ್ಲಿ ವಿರೋಧವಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಸ್ತ್ರೀಯರು ಮಸೀದಿ ಪ್ರವೇಶಿಸುವುದನ್ನು ಪ್ರವಾದಿ ಮುಹಮ್ಮದರು ವಿರೋಧಿಸಿದ್ದರು ಎಂಬುದಕ್ಕೂ ಯಾವುದೇ ಆಧಾರವಿಲ್ಲ ಎಂದು ವೇದಿಕೆಯ ಅಧ್ಯಕ್ಷೆ ವಿ.ಪಿ. ಜುಹ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.