ADVERTISEMENT

ಪರೀಕ್ಷೆ ವೇಳೆ ಮೂತ್ರ ವಿಸರ್ಜನೆಗೆ ಸಿಗದ ಅನುಮತಿ: ಪ್ರಕರಣ ದಾಖಲು

ವರದಿ ಕೇಳಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:26 IST
Last Updated 22 ಮಾರ್ಚ್ 2019, 20:26 IST

ತಿರುವನಂತಪುರ: ಪರೀಕ್ಷೆ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಮೂತ್ರ ವಿಸರ್ಜನೆಗೆ ತೆರಳಲು ಅನುಮತಿ ನಿರಾಕರಿಸಿದ್ದರಿಂದ ಶಿಕ್ಷಕಿಯೊಬ್ಬರ ವಿರುದ್ಧ ಕೇರಳದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಪದೇ ಪದೇ ಮನವಿ ಮಾಡಿದ್ದರೂ ವಿದ್ಯಾರ್ಥಿಗೆ ಅನುಮತಿ ನೀಡಲಿಲ್ಲ. ಇದರಿಂದ, ವಿದ್ಯಾರ್ಥಿ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದೆ ಪರೀಕ್ಷಾ ಕೊಠಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ. ಹೀಗಾಗಿ, ಮಾನಸಿಕವಾಗಿ ಕುಗ್ಗಿ, ಪರೀಕ್ಷೆಯನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ದೂರಿದ್ದಾರೆ.

ಮೂತ್ರ ವಿಸರ್ಜನೆ ನೆಪದಲ್ಲಿ ನಕಲು ಮಾಡಲು ಸಾಧ್ಯತೆಗಳಿರುತ್ತವೆ. ಆದ್ದರಿಂದ, ವಿದ್ಯಾರ್ಥಿಗೆ ಅನುಮತಿ ನೀಡಲಿಲ್ಲ ಎಂದು ಶಿಕ್ಷಕಿ ಪ್ರತಿಪಾದಿಸಿದ್ದಾರೆ. ಕೊಲ್ಲಂ ನಗರದ ಸಮೀಪದ ಕಡಕ್ಕಲ್‌ ಪ್ರೌಢಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಆಯೋಗವು ಶಾಲೆಯ ಆಡಳಿತ ಮಂಡಳಿಗೆ ಸೂಚಿಸಿದೆ. ವಿದ್ಯಾರ್ಥಿಯ ಪೋಷಕರು ಸಹ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಪರೀಕ್ಷೆ ಸಂದರ್ಭದಲ್ಲಿ ಶೌಚಾಲಯಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಬಾರದು ಎಂದು ಕೇರಳದ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ಹೊಸದಾಗಿ ಸುತ್ತೋಲೆ ಕಳುಹಿಸಿದೆ. ಮಕ್ಕಳ ಹಕ್ಕುಗಳ ಆಯೋಗವು ಸಹ ಈ ಬಗ್ಗೆ ನಿರ್ದೇಶನ ನೀಡಿದೆ ಎಂದು ಅಧ್ಯಕ್ಷ ಪಿ. ಸುರೇಶ್‌ ತಿಳಿಸಿದ್ದಾರೆ.

ಶಿಕ್ಷಕಿ ಮತ್ತು ವಿದ್ಯಾರ್ಥಿಯ ಹೇಳಿಕೆಗಳನ್ನು ಪಡೆದ ಬಳಿಕ ಆಯೋಗ ಮತ್ತು ಪೊಲೀಸರು ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದು ಸುರೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.