
ಕೊಯಿಕ್ಕೋಡ್ (ಕೇರಳ) (ಪಿಟಿಐ): 2023ರಲ್ಲಿ ಇಲ್ಲಿನ ಪೆರಾಂಬ್ರ ತಾಲ್ಲೂಕಿನಲ್ಲಿ 13 ವರ್ಷದ ಬಾಲಕಿಯ ಮೇಲೆ ತೀವ್ರ ಸ್ವರೂಪದ ಲೈಂಗಿಕ ದೌರ್ಜನ್ಯವೆಸಗಿದ 41 ವರ್ಷದ ಅಪರಾಧಿಗೆ ಕೇರಳ ಹೈಕೋರ್ಟ್ ಒಟ್ಟು 53 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತ (ಐಪಿಸಿ) ವಿವಿಧ ಕಲಂನ ಅಡಿಯಲ್ಲಿ ಅಪರಾಧಿ ಮುಹಮ್ಮದ್ ರೆಹಾನ್ ಅವರಿಗೆ ನಾದಪುರಂನ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವನ್ ಕೆ. ಮೆನನ್ ಶಿಕ್ಷೆ ವಿಧಿಸಿದ್ದಾರೆ’ ಎಂದು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಮನೋಜ್ ಅರೂರ್ ತಿಳಿಸಿದ್ದಾರೆ.
‘ವಿವಿಧ ಸ್ವರೂಪದ ಅಪರಾಧಗಳಿಗಾಗಿ 53 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದ್ದರೂ, ವಾಸ್ತವದಲ್ಲಿ 20 ವರ್ಷಗಳ ಅತ್ಯಧಿಕ ಜೈಲುಶಿಕ್ಷೆಯನ್ನು ಅನುಭವಿಸಬೇಕಿದೆ. ಇದಲ್ಲದೆ ಅಪರಾಧಿಗೆ ನ್ಯಾಯಾಲಯವು ₹2.1 ಲಕ್ಷ ದಂಡ ವಿಧಿಸಿದೆ’ ಎಂದು ಎಸ್‌ಪಿಪಿ ತಿಳಿಸಿದ್ದಾರೆ.
‘2023ರ ಆಗಸ್ಟ್ ತಿಂಗಳಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಬಾಲಕಿ ಕಲಿಯುತ್ತಿದ್ದ ಶಾಲೆಯ ಶಿಕ್ಷಕಿಯು ಸಹಾಯವಾಣಿ ‘ಚೈಲ್ಡ್ ಲೈನ್’ ಮೂಲಕ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ಸಂತ್ರಸ್ತೆಯ ಮನೆಗೆ ತೆರಳಿ, ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
‘ವಿಚಾರಣೆಯ ಸಮಯದಲ್ಲಿ ಪ್ಯಾಸಿಕ್ಯೂಷನ್ 13 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ, 21 ದಾಖಲೆಗಳನ್ನು ಹಾಜರುಪಡಿಸಿತು. ಶಿಕ್ಷೆ ಖಚಿತಪಡಿಸಲು 4 ಪುರಾವೆಗಳನ್ನು ಒದಗಿಸಿತ್ತು’ ಎಂದು ಮನೋಜ್ ಅರೂರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.