ADVERTISEMENT

ಕೇರಳಕ್ಕೆ ಅಪಾಯ ಎದುರಾಗುವ ಮನ್ಸೂಚನೆ: ಅಮಿತ್ ಶಾ ಎಚ್ಚರಿಕೆ

ಬೆದರಿಕೆಗಳನ್ನು ಗುರುತಿಸಿ, ತೊಡೆದಹಾಕುವಂತೆ ಸರ್ಕಾರಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 15:55 IST
Last Updated 11 ಜನವರಿ 2026, 15:55 IST
<div class="paragraphs"><p>ಅಮಿತ್ ಶಾ </p></div>

ಅಮಿತ್ ಶಾ

   

– ಪಿಟಿಐ ಚಿತ್ರ

ತಿರುವನಂತಪುರ: ‘ಈಗ ಕೇರಳದ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ಪರಿಸ್ಥಿತಿ ಶಾಂತವಾಗಿದೆ ಎಂಬಂತೆ ಕಾಣಿಸುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಅಪಾಯಕಾರಿ ಆಗುವಂತಹ ಹಲವು ಬೆದರಿಕೆಗಳು ನಿಧಾನವಾಗಿ ಹೊರಹೊಮ್ಮುತ್ತಿವೆ. ಅಂತಹವುಗಳನ್ನು ಗುರುತಿಸಿ, ತೊಡೆದ ಹಾಕಬೇಕಾದದು ಸರ್ಕಾರದ ಜವಾಬ್ದಾರಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎಚ್ಚರಿಸಿದರು.

ADVERTISEMENT

ಇಲ್ಲಿ ಆಯೋಜಿಸಿದ್ದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಪಿಎಫ್‌ಐ, ಜಮಾತ್‌–ಎ–ಇಸ್ಲಾಮಿಯಂತಹ ಸಂಘಟನೆಗಳು, ಎಸ್‌ಡಿಪಿಐನಂತಹ ರಾಜಕೀಯ ಪಕ್ಷಗಳ ಪಾತ್ರವನ್ನು ಪ್ರಶ್ನಿಸುವ ಜೊತೆಗೆ, ಅವುಗಳು ಜನರನ್ನು ನಿಜವಾಗಿಯೂ ಸುರಕ್ಷಿತವಾಗಿ ಇಡಬಹುದೇ?’ ಎಂದರು. ‘ಇಂಥ ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಕೇರಳ ಸುರಕ್ಷಿತವಾಗಿರಲು ಸಾಧ್ಯವೇ’ ಎಂದೂ ಪ್ರಶ್ನಿಸಿದರು.

‘ಸಹಬಾಳ್ವೆಯಲ್ಲಿ ನಂಬಿಕೆಯಿಲ್ಲದವರಿಂದ ಏಕತೆಯನ್ನು ಹೇಗೆ ಖಚಿತಪಡಿಸಿಕೊಳ್ಳಲು ಸಾಧ್ಯ’ ಎಂದು ಕೇಳಿದ ಶಾ, ‘ತೆರೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಕಾಣದ ಅಪಾಯಗಳನ್ನು ಗುರುತಿಸುವ ಮೂಲಕ ಕೇರಳವನ್ನು ಸುರಕ್ಷಿತವಾಗಿಡಬಹುದು’ ಎಂದು ಪ್ರತಿಪಾದಿಸಿದರು. ‘ಕೇರಳದಲ್ಲಿ ಅಭಿವೃದ್ಧಿ ಜೊತೆಗೆ ಸುರಕ್ಷತೆಯೂ ಬಹಳ ಮುಖ್ಯ’ ಎಂದು ವಿವರಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲಿನ ನಿಷೇಧವನ್ನು ಉಲ್ಲೇಖಿಸಿದ ಅವರು, ಸ್ಥಳೀಯ ಪಕ್ಷಗಳಾದ ಎಲ್‌ಡಿಎಫ್ ಮತ್ತು ಯುಡಿಎಫ್ ಎರಡೂ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿಲ್ಲ ಅಥವಾ ಬೆಂಬಲಿಸಿಲ್ಲ’ ಎಂದರು.

‘ನಾವು ಪಿಎಫ್‌ಐ ನಿಷೇಧಿಸುವ ಮೂಲಕ, ಆ ಸಂಘಟನೆಯ ಕಾರ್ಯಕರ್ತರನ್ನು ಕಂಬಿಗಳ ಹಿಂದೆ ಹಾಕಿದ್ದೇವೆ. ಪರಿಣಾಮವಾಗಿ ಇಡೀ ದೇಶ ಸುರಕ್ಷಿತವಾಗಿದೆ. ಇದನ್ನು ನಾನು ಹೋದಕಡೆಯಲ್ಲೆಲ್ಲ ಸ್ಪಷ್ಟವಾಗಿ ಹೇಳುತ್ತೇನೆ’ ಎಂದರು.

ಕೇರಳ ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಅವರು ಕೆಲವು ದಿನಗಳ ಹಿಂದೆ ‘ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷ, ಐಯುಎಂಎಲ್ ಮತ್ತು ಇಸ್ಲಾಮಿಕ್ ಸಂಘಟನೆ ಜಮಾತೆ-ಎ-ಇಸ್ಲಾಮಿ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಧರ್ಮವನ್ನು ಬಳಸಿಕೊಳ್ಳುವ ಮೂಲಕ ಅಪಾಯಕಾರಿ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದ್ದರು. ಇದರ ಹಿನ್ನೆಲೆಯಲ್ಲಿ ಅಮಿತ್‌ ಶಾ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.