ADVERTISEMENT

Kerala Bomb Blast | ಮೂಲಭೂತವಾದಿಗಳ ಬಗ್ಗೆ ಪಿಣರಾಯಿಗೆ ಸಹಾನುಭೂತಿ: ರಾಜೀವ್

ಪಿಟಿಐ
Published 30 ಅಕ್ಟೋಬರ್ 2023, 10:20 IST
Last Updated 30 ಅಕ್ಟೋಬರ್ 2023, 10:20 IST
ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್   

ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮೂಲಭೂತವಾದಿಗಳಿಗೆ ಹಾಗೂ ಮೂಲಭೂತವಾದಿ ಗುಂಪುಗಳ ಪರ ಸಹಾನುಭೂತಿ ತೋರಿಸುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

ಕೊಚ್ಚಿ ಸಮೀಪದ ಕಳಮಶ್ಶೇರಿಯಲ್ಲಿ ನಡೆದ ಸ್ಫೋಟ ಸಂಬಂಧ ಬಿಜೆ‍ಪಿ ನಾಯಕರ ಸಾಮಾಜಿಕ ಜಾಲತಾಣ ‍‍ಪೋಸ್ಟ್‌ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಾಡಿದ್ದ ಟೀಕೆಗೆ ರಾಜೀವ್ ಚಂದ್ರಶೇಖರ್ ಅವರು ಈ ರೀತಿ ‍ಪ್ರತಿಕ್ರಿ ನೀಡಿದ್ದಾರೆ.

ತಿರುವನಂತಪುರದ ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, ಸ್ಫೋಟ ಸಂಬಂಧ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಕೋಮುವಾದದಿಂದ ಕೂಡಿದೆ ಎಂದು ಕಿಡಿಕಾರಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್‌, ‘ನನ್ನ ಎಕ್ಸ್‌ ಪೋಸ್ಟ್‌ನಲ್ಲಿ ಯಾವುದೇ ಸಮುದಾಯವನ್ನು ಉಲ್ಲೇಖಿಸಿಲ್ಲ. ನಾನು ಹಮಾಸ್‌ ಬಗ್ಗೆ ಮಾತನಾಡಿದ್ದೆ. ಮುಖ್ಯಮಂತ್ರಿಯವರು ರಾಜ್ಯ ಹಾಗೂ ದೇಶದಲ್ಲಿರುವ ಮುಸ್ಲಿಂ ಸಹೋದರ ಸಹೋದರಿಯರನ್ನು ಹಮಾಸ್‌ಗೆ ಹೋಲಿಕೆ ಮಾಡುತ್ತಿದ್ದಾರೆ’ ಎಂದು ಪ್ರತ್ಯುತ್ತರ ನೀಡಿದ್ದಾರೆ.

‘ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಅವಧಿಯಲ್ಲಿ ಮೂಲಭೂತವಾದಿಗಳಿಗೆ ಹಾಗೂ ಮೂಲಭೂತವಾದಿ ಗುಂ‍ಪುಗಳ ಬಗ್ಗೆ ಕೇರಳ ಸಹಾನುಭೂತಿ ತೋರಿಸಿದೆ. ಕೇರಳದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ತುಷ್ಠೀಕರಣದ ಇತಿಹಾಸವೇ ಇದೆ’ ಎಂದು ಹೇಳಿದ್ದಾರೆ.

ಪಿಣರಾಯಿಯವರನ್ನು ಕೆರಳಿಸಿದ್ದ ರಾಜೀವ್ ಅವರ ಹೇಳಿಕೆ ಏನು?

‘ಭ್ರಷ್ಟಾಚಾರದಿಂದ ಅಪಖ್ಯಾತಿ ಪಡೆದ ಮುಖ್ಯಮಂತ್ರಿಯಿಂದ ಕೊಳಕು, ನಾಚಿಕೆಯಿಲ್ಲದ ತುಷ್ಠೀಕರಣದ ರಾಜಕಾರಣ. ಕೇರಳದಲ್ಲಿ ಭಯೋತ್ಪಾದಕ ಹಮಾಸ್‌ನ ಜಿಹಾದ್‌ ಕರೆಗಳು ಮುಗ್ಧ ಕ್ರಿಶ್ಚಿಯನ್ನರ ಮೇಲೆ ದಾಳಿಗಳು ಮತ್ತು ಬಾಂಬ್ ಸ್ಫೋಟಗಳನ್ನು ಉಂಟುಮಾಡುತ್ತಿವೆ. ಆದರೆ ಇವರು ದೆಹಲಿಯಲ್ಲಿ ಕುಳಿತುಕೊಂಡು ಇಸ್ರೇಲ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಸ್ಫೋಟದ ಬಳಿಕ ಚಂದ್ರಶೇಖರ್ ಭಾನುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಇದಕ್ಕೆ ‍‍ಪ್ರತಿಕ್ರಿಯಿಸಿದ್ದ ಪಿಣರಾಯಿ ವಿಜಯನ್, ತನಿಖೆ ನಡೆಯುತ್ತಿರುವಾಗ, ಜವಾಬ್ದಾರಿಯುತ ಹುದ್ದೆಯಲ್ಲಿ ಇರುವ ಕೇಂದ್ರ ಸಚಿವರು ಈ ರೀತಿ ಹೇಗೆ ಮಾತನಾಡುತ್ತಾರೆ. ಇದು ಕೋಮುದ್ವೇಷದಿಂದ ಕೂಡಿದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.