ADVERTISEMENT

ವಯನಾಡ್‌ ದುರಂತಕ್ಕೆ 1 ವರ್ಷ: ಕಮರಿದ ನೆಲದಲ್ಲಿ ಚಿಗುರೊಡೆದ ಬದುಕು

ಪಿಟಿಐ
Published 29 ಜುಲೈ 2025, 11:21 IST
Last Updated 29 ಜುಲೈ 2025, 11:21 IST
   

ವಯನಾಡ್‌(ಕೇರಳ): ಕಳೆದ ವರ್ಷ ಇದೇ ದಿನ, ವಯನಾಡ್‌ ತನ್ನ ಚೆಲುವನ್ನೆಲ್ಲ‌ ಹೊದ್ದುಕೊಂಡು,‌ ಶಾಂತವಾಗಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಸ್ವರ್ಗದಂತಿದ್ದ ನೆಲದಲ್ಲಿ ನರಕದರ್ಶನವೇ ಆಗಿದ್ದನ್ನು ಕೇರಳ‌ ಚರಿತ್ರೆ ಎಂದೂ ಮರೆಯಲು ಸಾಧ್ಯವಿಲ್ಲ.

ಜುಲೈ 30ರಂದು ನಸುಕಿನಲ್ಲಿ ವಯನಾಡಿನ ಚೂರಲ್ಮಲ, ಮುಂಡಕ್ಕೈ ಎನ್ನುವ ಪ್ರದೇಶಗಳು ಭೂಕುಸಿತ ಹಾಗೂ ಪ್ರವಾಹದ ಆರ್ಭಟಕ್ಕೆ ಅಕ್ಷರಶಃ ನಿರ್ನಾಮಗೊಂಡಿತ್ತು.

ಕೇರಳದ‌‌ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ವಯನಾಡ್‌, ನಿರಂತರ ಮಳೆಯ ನಡುವೆ ಹಚ್ಚಹಸುರಿನ‌ ನಡುವೆ ಗಿರಿ ಪರ್ವತದ‌ ಸೊಬಗಿನಿಂದ ಕಂಗೊಳಿಸುತ್ತ, ಪ್ರವಾಸಿಗರನ್ನು ಸೆಳೆಯುತ್ತಿದ್ದ ತಾಣ.

ADVERTISEMENT

ಈ ಭೀಕರ ದುರಂತ‌ ಸಂಭವಿಸಿ ಇಂದಿಗೆ ಒಂದು ವರ್ಷ ಕಳೆದಿದೆ. ಬಹುತೇಕ ಅಲ್ಲಿನ ಜನ ಊರು ಬಿಟ್ಟು ಹೋಗಿದ್ದರಿಂದ ಅಲ್ಲಿ ಈಗ ಬೆರಳೆಣಿಕೆಯಷ್ಟು ಆದಿವಾಸಿ ಕುಟುಂಬಗಳ ಮನೆಗಳು ಮಾತ್ರ ಉಳಿದಿವೆ.

ಇನ್ನು, ದುರಂತದಲ್ಲಿ ಕುಟುಂಬವನ್ನು ಕಳೆದುಕೊಂಡು ಬದುಕು ಸಾಗಿಸುತ್ತಿರುವವರ ಪ್ರತಿ ಒಬ್ಬರ ಕಥೆಯು ಸ್ಫೂರ್ತಿದಾಯಕವಾಗಿವೆ. ನೋವಿನಲ್ಲಿಯೂ ನಗುವ ಅವರು ಬದುಕಿಗೆ ಒದಗಿ ಬಂದ ಹೊಸ ಅಧ್ಯಾಯವನ್ನು ಸ್ವೀಕರಿಸಿ ಮುನ್ನೆಡೆಯುತ್ತಿದ್ದಾರೆ.

ಕುಟುಂಬದ 11 ಸದಸ್ಯರನ್ನು ಕಳೆದುಕೊಂಡು ಒಬ್ಬಂಟಿಯಾಗಿ ಬದುಕುತ್ತಿರುವ ಮುಂಡಕ್ಕೈ ನಿವಾಸಿ ನೌಫಲ್‌, ಈ ಘಟನೆ ನಡೆದಾಗ ವಿದೇಶದಲ್ಲಿದ್ದರು. ಮನೆ, ಆಸ್ತಿ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಅವರು, ದಾನಿಯೊಬ್ಬರ ಸಹಾಯದಿಂದ ಮೆಪ್ಪಾಡಿಯಲ್ಲಿ ಹೋಟೆಲ್‌ವೊಂದನ್ನು ಪ್ರಾರಂಭಿಸಿದ್ದಾರೆ. ಅದಕ್ಕೆ ‘ಜುಲೈ 30’ ಎಂದು ನಾಮಕರಣ ಮಾಡಿದ್ದಾರೆ.

ದುರಂತದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಕಥೆ ಕಲ್ಲೆದೆಯನ್ನು ಕರಗಿಸುತ್ತದೆ. ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿರುವ ಈ ಮಕ್ಕಳು ಕಿನ್‌ಶಿಫ್‌ ಫೋಸ್ಟರ್‌ ಕೇರ್ ಕಾರ್ಯಕ್ರಮದಡಿ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಮಕ್ಕಳ ದೂರದ ಸಂಬಂಧಿಗಳು ಸರ್ಕಾರದ ಬೆಂಬಲದೊಂದಿಗೆ ಅವರ ಪೋಷಣೆ ಮಾಡಲು ಈ ಕಾರ್ಯಕ್ರಮ ಅನುವು ಮಾಡಿಕೊಟ್ಟಿದೆ.

ಇದೇ ರೀತಿ ಮನೆ–ಮಠ, ಆಸ್ತಿ, ಕುಟುಂಬ ಸದಸ್ಯರನ್ನು ಕಳೆದುಕೊಂಡ ಎಷ್ಟೊ ಮಂದಿ ದುರಂತದ ಕಹಿ ನೆನಪಿನಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಿದ್ದಾರೆ. ತಮ್ಮವರ ನೆನಪಿನಲ್ಲಿಯೇ ಜೀವನ ಕಳೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.