ಚೂರಲ್‌ಮಲದಲ್ಲಿ ಶೋಧ ಕಾರ್ಯದ ನಡುವೆಯೇ ನಾಪತ್ತೆಯಾಗಿರುವ ಬಂಧುಗಳ ಫೋಟೊ ಹಿಡಿದು ವ್ಯಕ್ತಿಯೊಬ್ಬರು ಹುಡುಕಾಟ ನಡೆಸಿದ್ದರು
–ಪಿಟಿಐ ಚಿತ್ರ
ಮೇಪ್ಪಾಡಿ (ವಯನಾಡ್ ಜಿಲ್ಲೆ): ಸೂರ್ಯ ಮುಳುಗಿದ್ದ. ಸುತ್ತಲೂ ಕತ್ತಲು ಆವರಿಸಿತ್ತು. ಅಟ್ಟಮಲ ಮತ್ತು ಚೂರಲ್ ಮಲ ಪ್ರದೇಶಗಳನ್ನು ಸಂಪರ್ಕಿಸುವ ಬೇಯ್ಲಿ ಸೇತುವೆಯನ್ನು ಪುನರ್ ನಿರ್ಮಿಸುವ ಕಾರ್ಯ ಸೇನಾಪಡೆಯಿಂದ ತ್ವರಿತಗತಿಯಲ್ಲಿ ಸಾಗಿತ್ತು. ಮುಂಡಕ್ಕೈ ಭಾಗದಲ್ಲಿ ಕೊಚ್ಚಿಹೋದ ಸೇತುವೆಯ ಮರುನಿರ್ಮಾಣ ಕಾರ್ಯ ರಾತ್ರಿ ವೇಳೆ ಬಹುತೇಕ ಪೂರ್ಣಗೊಂಡಿತು. ಆದರೆ ಮಹಾ ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಜೀವ–ಜೀವನ...?
ಮೇಪ್ಪಾಡಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೂಕುಸಿತದಿಂದ ಬದುಕು ಕಳೆದುಕೊಂಡ ನೂರಾರು ಮಂದಿಯಲ್ಲಿ ಉಳಿದಿರುವುದು ಇದೊಂದೇ ಪ್ರಶ್ನೆ. ಜೀವಜಲ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾದ ಚಾಲಿಯಾರ್ ನದಿ ರಾತ್ರಿ ಹಗಲಾಗುವಷ್ಟರಲ್ಲಿ ಕಸಿದುಕೊಂಡು ಹೋದ ತಮ್ಮವರನ್ನು ನೆನೆಯುತ್ತ ಕಣ್ಣೀರ ಕೋಡಿ ಹರಿಸುತ್ತಿರುವವರ ಪ್ರತಿಯೊಬ್ಬರರನ್ನೂ ಈಗ ಈ ಪ್ರಶ್ನೆ ಕಾಡುತ್ತಿದೆ.
‘ರಾತ್ರಿ ಸುಮಾರು 1.30 ಆಗಿರಬಹುದು. ಬಂಡೆ ಕಲ್ಲು ಸಿಡಿದಂಥ ಸದ್ದು ಕೇಳಿಸಿತು. ಬೆಚ್ಚಿ ಬಿದ್ದು ಕಣ್ಣುಜ್ಜುತ್ತಾ ಕಿಟಕಿಯಿಂದಾಚೆ ನೋಡಿದರೆ ಮೇಲ್ಭಾಗದಿಂದ ಗುಡ್ಡವೇ ಇಳಿದು ಬರುತ್ತಿದ್ದು ಕಂಡಿತು. ಎಲ್ಲರನ್ನೂ ಎಬ್ಬಿಸಿ ಹೊರಗೆ ಓಡುವಂತೆ ತಿಳಿಸಿದೆ. ಅಷ್ಟರಲ್ಲಿ ಶಬ್ದ ಭೀಕರವಾಗುತ್ತ ಸಾಗಿತು. ಕಲ್ಲು, ಮಣ್ಣು, ಮರಗಳು, ಕೆಸರು ಎಲ್ಲವೂ ನಮ್ಮತ್ತ ನುಗ್ಗಿ ಬರುತ್ತಿತ್ತು. ಮಗಳು ಕೆಸರಿನಲ್ಲಿ ಸಿಲುಕಿದಳು. ಅವಳನ್ನು ಉಳಿಸಿದೆ. ನಮ್ಮ ಮನೆಯ ಎಲ್ಲರೂ ಉಳಿದೆವು. ಆದರೆ ಅತ್ತ ಇತ್ತ ನೋಡಿದಾಗ ಸಮೀಪದ ನಿವಾಸಿಗಳೆಲ್ಲರೂ ಮಣ್ಣಿನಲ್ಲಿ ಮಣ್ಣಾಗಿ ಹೋಗುವುದನ್ನು ಕಣ್ಣಾರೆ ಕಾಣಬೇಕಾಯಿತು. ನಮ್ಮ ಮನೆ ಇಲ್ಲ. ಸಂಬಂಧಿಕರು ಇಲ್ಲ. ಸುತ್ತಮುತ್ತ ಇದ್ದ ಯಾರೂ ಈಗಿಲ್ಲ..’ ಎಂದು ಕಾಳಜಿ ಕೇಂದ್ರದಲ್ಲಿ ಕಳೆಯುತ್ತಿರುವ ಮೊಯ್ದು ಹೇಳುತ್ತಾ ಸಾಗಿದರು. ಕೊನೆ ಕೊನೆಗೆ ಅವರ ದನಿ ನಡುಗಿತು. ಗಂಟಲು ಕಟ್ಟಿತು. ಕಣ್ಣೀರು ಸುರಿಯಿತು.
ಮೊಯ್ದು ಅವರ ಪಕ್ಕದಲ್ಲಿದ್ದ ತಮಿಳು ಮಿಶ್ರಿತ ಮಲಯಾಳಂ ಮಾತನಾಡುತ್ತಿದ್ದ ವ್ಯಕ್ತಿಗೆ ತನ್ನ ಹೆಸರು ಹೇಳಿಕೊಳ್ಳುವುದಕ್ಕೂ ಇಷ್ಟ ಇರಲಿಲ್ಲ. ‘ಇನ್ನೇನು ಬಾಕಿ ಇದೆ, ನಾವಿದ್ದಲ್ಲಿ ಏನೂ ಇಲ್ಲ. ಯಾವ ಕಾರಣಕ್ಕೂ ನಾನಿನ್ನು ಅತ್ತ ಸುಳಿಯಲಾರೆ...’ ಎಂದು ಹೇಳುತ್ತ ಅವರು ಕಣ್ಣೀರಾದರು.
ಪೂತ್ತುಮಲೆ ಮತ್ತು ಕವಳಪ್ಪಾರದಲ್ಲಿ ವರ್ಷಗಳ ಹಿಂದೆ ಸಂಭವಿಸಿದ ಭೂಕುಸಿತಕ್ಕಿಂತ ಭೀಕರ ವಾತಾವರಣ ಸೃಷ್ಟಿಸಿರುವ ಮೇಪ್ಪಾಡಿ ಘಟನೆಯ ಎರಡನೇ ದಿನವಾದ ಬುಧವಾರ ಕಟ್ಟಡಗಳ ಒಳಗೆ ಹುಡುಕಿದಲ್ಲೆಲ್ಲ ಶವಗಳೇ ಸಿಗುತ್ತಿದ್ದವು. ಹೊತ್ತು ನೆತ್ತಿಗೇರುತ್ತಿದ್ದ ಹೊತ್ತಿನಲ್ಲಿ ಚೂರಲ್ ಮಲ ಗ್ರಾಮ ಪಂಚಾಯಿತಿ ಕಚೇರಿಯ ಆಸುಪಾಸಿನಲ್ಲಿ ಕುಸಿದು ಬಿದ್ದ ಛಾವಣಿಯನ್ನು ಸರಿಸುತ್ತಿದ್ದಂತೆ ನಿಶ್ಚಲವಾಗಿದ್ದ ಎರಡು ದೇಹಗಳು ಪತ್ತೆಯಾದವು. ಅದು ನಾಸರ್ ಮತ್ತು ಸುದೇವ್ ಕುಟುಂಬಗಳು ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಸ್ಥಳ. ಆದರೆ ಮೃತದೇಹಗಳು ಸಿಕ್ಕಿದ ಜಾಗದಲ್ಲಿ ಇದ್ದ ಮನೆ ಯಾರದು ಎಂದು ಸ್ಥಳೀಯರಿಗೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅಷ್ಟರ ಮಟ್ಟಿಗೆ ಇಡೀ ಪ್ರದೇಶ ಬದಲಾಗಿತ್ತು.
ಮೇಪ್ಪಾಡಿಯಿಂದ 13 ಕಿಲೊಮೀಟರ್ ದೂರದ ಚೂರಲ್‌ಮಲ, ಸಣ್ಣ ನೀರಿನ ಹರಿವು ಇದ್ದ ಜಾಗ. ಆದರೆ ಭೂಕುಸಿತದಿಂದ ಹರಿದು ಬಂದ ನೀರು ಆ ಪ್ರದೇಶವನ್ನೇ ನದಿಯಂತಾಗಿಸಿದೆ. ಅಲ್ಲಿದ್ದ ಸಣ್ಣ ಸೇತುವೆ ಈಗಿಲ್ಲ. ಮನೆ, ಶಾಲೆ, ಅಂಗಡಿಗಳ ಪೈಕಿ ಕೆಲವು ಮಾತ್ರ ಅವಶೇಷಗಳಂತೆ ಉಳಿದಿವೆ. ಮುಂಡಕ್ಕೈ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 100 ಮನೆಗಳ ಪೈಕಿ 30 ಮನೆಗಳು ಮಾತ್ರ ಈಗ ಉಳಿದಿವೆ. ಆದರೆ ಮನೆ ಮಂದಿಯ ಪೈಕಿ ಯಾರಿದ್ದಾರೆ, ಯಾರಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ.
ಮೇಪ್ಪಾಡಿಯ ಕುಟುಂಬ ಆರೋಗ್ಯ ಕೇಂದ್ರಕ್ಕೆ ತೆರಳುವ ಮಾರ್ಗದಲ್ಲಿ ಮೃತರ ಶವ ಹೊತ್ತು ಸಾಗಿರುವ ಆಂಬುಲೆನ್ಸ್‌ಗಳ ಸಾಲು
ಮಲಪ್ಪುರಂ ಜಿಲ್ಲೆಯಲ್ಲಿ ಮೃತದೇಹಗಳು
ವಯನಾಡ್‌ನ ನೆರೆಯ ಮಲಪ್ಪುರಂ ಜಿಲ್ಲೆಯ ಮುಂಡೇರಿ ಮತ್ತು ಪೋತ್ತುಕಲ್ಲ್ ಪ್ರದೇಶಗಳಲ್ಲಿ ಚಾಲಿಯಾರ್ ನದಿ ತೀರದಲ್ಲಿ ಆರು ಮಹಿಳೆಯರು ಮತ್ತು ನಾಲ್ವರು ಪುರುಷರನ್ನು ಒಳಗೊಂಡ 15 ಮೃತದೇಹಗಳನ್ನು ಬುಧವಾರ ಪತ್ತೆ ಮಾಡಲಾಗಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಲಭಿಸಿದ ಮೃತದೇಹಗಳ ಸಂಖ್ಯೆ 72 ಆಗಿದೆ. ಡಿಎನ್‌ಎ ಪರೀಕ್ಷೆಯ ನಂತರವಷ್ಟೇ ಈ ದೇಹಗಳ ಗುರುತು ಪತ್ತೆಯಾಗಲಿದೆ.
ಚಾಲಿಯಾರ್ ನದಿಯ ಇಕ್ಕೆಲಗಳ, ಅಟ್ಟಮಲ ಮತ್ತು ಮುಂಡಕ್ಕೈ ಭಾಗದಲ್ಲಿ ಸಿಲುಕಿದ್ದ 1486 ಮಂದಿಯನ್ನು ರಕ್ಷಿಸಲಾಗಿದ್ದು ಅವರನ್ನು ವಿವಿಧ ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗುರುವಾರ 11.30ಕ್ಕೆ ನಡೆಯುವ ಸರ್ವಪಕ್ಷಗಳ ಸಭೆಯಲ್ಲಿ ಪರಿಹಾರದ ಮೊತ್ತವನ್ನು ನಿರ್ಧರಿಸಲಾಗುವುದು. ಒಂಬತ್ತು ಮಂದಿ ಸಚಿವರು ಸ್ಥಳದಲ್ಲಿ ಬೀಡುಬಿಟ್ಟಿದ್ದು ಎರಡು ತಂಡಗಳಾಗಿ ಪರಿಹಾರ ಕಾರ್ಯಗಳಿಗೆ ನೇತೃತ್ವ ವಹಿಸಿದ್ದಾರೆ. ಸಹಾಯವಾಣಿ ಕೊಠಡಿಯಲ್ಲಿ ಸಚಿವರು ಕಡ್ಡಾಯವಾಗಿ ಇರಬೇಕೆಂದು ಸರ್ಕಾರ ಸೂಚಿಸಿದೆ.
ರಕ್ಷಣಾ ಕಾರ್ಯಾಚರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.