ADVERTISEMENT

ಕಿಡ್ನಿ, ಹೃದಯ, ಕಣ್ಣು ದಾನ: ಸರ್ಕಾರಿ ಗೌರವದೊಂದಿಗೆ 10 ತಿಂಗಳ ಮಗು ಅಂತ್ಯಸಂಸ್ಕಾರ

ಪಿಟಿಐ
Published 15 ಫೆಬ್ರುವರಿ 2026, 14:04 IST
Last Updated 15 ಫೆಬ್ರುವರಿ 2026, 14:04 IST
   

ಅದು 10 ತಿಂಗಳ ಹೆಣ್ಣುಮಗು.. ಅಪಘಾತದಲ್ಲಿ ತೀವ್ರ ಗಾಯಗೊಂಡು ಬ್ರೈನ್ ಡೆಡ್ ಆಗಿ ಮೃತಪಟ್ಟಿದೆ.. ಆದರೆ, ತನ್ನ ಸಾವಿನಲ್ಲೂ ಹಲವರಿಗೆ ಜೀವದಾನ ಮಾಡಿದೆ. ಹೌದು ಕೇರಳದಲ್ಲಿ ಬ್ರೈನ್ ಡೆಡ್ ಆಗಿ ಮೃತಪಟ್ಟ ಮಗುವಿನ ಅಂಗಾಂಗ ದಾನ ಮಾಡಲಾಗಿದೆ. ಕಿಡ್ನಿ, ಯಕೃತ್ತು, ಕಣ್ಣು. ಹೃದಯ ಕವಾಟಗಳನ್ನು ದಾನ ಮಾಡಲಾಗಿದೆ. ಇವುಗಳನ್ನು ಅಗತ್ಯವಿರುವ ಐದು ಜನರಿಗೆ ಕಸಿ ಮಾಡಲು ನಿರ್ಧರಿಸಲಾಗಿದೆ.

ಇಂದು ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯಲ್ಲಿ ಮಗು ಅಲಿನ್ ಶೆರಿನ್ ಅಬ್ರಹಾಂ ಅಂತ್ಯ ಸಂಸ್ಕಾರ ನಡೆದಿದ್ದು, ಮಂತ್ರಿಗಳ ಜೊತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹಲವು ಜನರು ಭಾಗವಹಿಸಿದ್ದರು. ರಾಜ್ಯ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸುರೇಶ್‌ ಗೋಪಿ, ರಾಜ್ಯ ಸರ್ಕಾರದ ಪರವಾಗಿ ಸಚಿವೆ ವೀಣಾ ಜಾರ್ಜ್‌ ಅವರು ಮಗುವಿನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಸಚಿವರಾದ ವಿ.ಎನ್‌. ವಾಸವನ್‌, ಸಾಜಿ ಚೆರಿಯನ್‌, ರೋಶಿ ಆಗಸ್ಟೀನ್‌, ಕಾಂಗ್ರೆಸ್‌ ನಾಯಕರಾದ ಪಿ.ಎಸ್‌. ವಿಷ್ಣುನಾದ್‌, ಶಾಸಕರು ಕೂಡ ಭಾಗಿಯಾಗಿದ್ದರು. 

ADVERTISEMENT

ಅಲ್ಲದೇ, ಅಲಿನ್‌ ಅಂಗಾಂಗ ಪಡೆದಿದ್ದ ಮಕ್ಕಳ ಪೈಕಿ ಒಂದು ಮಗುವಿನ ಕುಟುಂಬಸ್ಥರು ಕೂಡ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿ ನಿವಾಸಿಗಳಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ ಮಗು ಶೆರಿನ್, ಫೆಬ್ರುವರಿ 5ರಂದು ಎಂಸಿ ರಸ್ತೆಯ ಕೊಟ್ಟಾಯಂ ಬಳಿಯ ಪಲ್ಲಂನಲ್ಲಿ ತನ್ನ ತಾಯಿ ಮತ್ತು ಅಜ್ಜ-ಅಜ್ಜಿಯರೊಂದಿಗೆ ಪ್ರಯಾಣಿಸುತ್ತಿದ್ದ ಮಗು ಆಲಿನ್ ಶೆರಿನ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿತ್ತು. ತೀವ್ರ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಮಗುವಿನ ಬ್ರೈನ್ ಡೆಡ್ ಆಗಿದೆ ಎಂದು ಫೆಬ್ರುವರಿ 12ರಂದು ವೈದ್ಯರು ದೃಢಪಡಿಸಿದ್ದರು.

ಮಗುವಿನ ಪೋಷಕರ ಒಪ್ಪಿಗೆಯೊಂದಿಗೆ, ಅಂಗಾಂಗ ದಾನ ಪ್ರಕ್ರಿಯೆಯನ್ನು ಕೇರಳ ರಾಜ್ಯದ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(ಕೆ-ಸೊಟ್ಟೊ) ಮೂಲಕ ನಡೆಸಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೃದಯ ಕವಾಟವನ್ನು ತಿರುವನಂತಪುರದ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗೆ; ಆಕೆಯ ಯಕೃತ್ತನ್ನು ತಿರುವನಂತಪುರದ ಕಿಮ್ಸ್ ಆಸ್ಪತ್ರೆಗೆ ಮತ್ತು ಮೂತ್ರಪಿಂಡಗಳನ್ನು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಕಣ್ಣುಗಳನ್ನು ಐ ಬ್ಯಾಂಕ್‌ಗೆ ದಾನ ಮಾಡಲಾಗಿದೆ.

ಐದು ಜನರಿಗೆ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಗುವಿನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ಧರಿಸಲಾಗಿತ್ತು ಎಂದು ಕೈಗಾರಿಕಾ ಸಚವ ಆರ್ ರಾಜನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.