ADVERTISEMENT

ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಾನೂನು ಸಮರ

ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾಗೆ ಕಡ್ಡಾಯ ರಜೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 9:48 IST
Last Updated 4 ನವೆಂಬರ್ 2018, 9:48 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅ.23 ರಂದು ಹೊರಡಿಸಿದ ಆದೇಶವು ಪ್ರಧಾನಮಂತ್ರಿ, ಲೋಕಸಭೆ ಪ್ರತಿಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡಿರುವ ಉನ್ನತಾಧಿಕಾರ ಸಮಿತಿಯ ಒಪ್ಪಿಗೆ ಪಡೆದಿಲ್ಲ. ಈ ಆದೇಶವು ಸಂಪೂರ್ಣ ಕಾನೂನುಬಾಹಿರ, ಸ್ವೇಚ್ಛಾನುಸಾರ ಮತ್ತು ಪ್ರತಿಕಾರದಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ.

ಹಿರಿಯ ವಕೀಲ ಕಪಿಲ್ ಸಿಬಲ್, ವಕೀಲ ದೇವದತ್ತ ಕಾಮತ್ ಮೂಲಕ ಖರ್ಗೆ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಸಿಬಿಐನ ಸಾಂಸ್ಥಿಕ ಪಾವಿತ್ರ್ಯತೆ ಮತ್ತು ಸಮಗ್ರತೆ ಕಾಪಾಡಿಕೊಳ್ಳಲು’ ಈ ಆದೇಶಗಳನ್ನು ರದ್ದು ಮಾಡಬೇಕು ಎಂದು ಅವರು ಕೋರಿದ್ದಾರೆ.

‘ದೆಹಲಿಯ ವಿಶೇಷ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 4ಎ, ಸೆಕ್ಷನ್‌ 4ಬಿ ಮತ್ತು ವಿನೀತ್‌ ನಾರಾಯಣ್‌ ಅವರ ಪ್ರಕರಣದ ನಿರ್ದೇಶನಗಳ ಪ್ರಕಾರ ನಿರ್ದೇಶಕರ ಅಧಿಕಾರವಧಿಯನ್ನು ಸಿಬಿಐ ಕಾಯ್ದೆಯಲ್ಲಿ ರಕ್ಷಿಸಲಾಗಿದೆ. ಸಮಿತಿಯ ಅನುಮತಿ ಪಡೆಯದೆ ವರ್ಗಾವಣೆ ಸಹ ಮಾಡುವಂತಿಲ್ಲ’ ಎಂದು ಖರ್ಗೆ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

‘ಕಾನೂನುಬದ್ಧ ಸಮಿತಿಯನ್ನು ಸಂಪೂರ್ಣವಾಗಿ ಹೊರಗಿಟ್ಟು ಅ. 23 ರಂದು ಆದೇಶ ಹೊರಡಿಸಲಾಗಿದೆ. ಈ ನಿರ್ಧಾರ ರಾಜಕೀಯ ಪ್ರೇರಿತ’ ಎಂದು ಅವರು ಆರೋಪಿಸಿದ್ದಾರೆ.

* ಇಂಥ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಸಮಿತಿಯ ಸದಸ್ಯನಾಗಿರುವ ನನ್ನನ್ನು ಸೌಜನ್ಯಕ್ಕೂ ಸಂಪರ್ಕಿಸಿಲ್ಲ. ಈ ಬಗ್ಗೆ ಯಾವುದೇ ಸಭೆ ಸಹ ನಡೆಸಿಲ್ಲ.

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.