ADVERTISEMENT

20 ವರ್ಷಗಳಲ್ಲಿ 'ಜಂಗಲ್‌ ರಾಜ್‌' ಕೊನೆಗೊಳಿಸಿಲ್ಲ ಏಕೆ: ಬಿಜೆಪಿಗೆ ಖರ್ಗೆ ಪ್ರಶ್ನೆ

ಏಜೆನ್ಸೀಸ್
Published 9 ನವೆಂಬರ್ 2025, 5:31 IST
Last Updated 9 ನವೆಂಬರ್ 2025, 5:31 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

– ಪಿಟಿಐ ಚಿತ್ರ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಹೇಳಿಕೆಗಳು ಆಧಾರರಹಿತ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂಬ ಎನ್‌ಡಿಎ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಅವರು ತಮ್ಮ ದತ್ತಾಂಶ ಮತ್ತು ಅಂಕಿಅಂಶಗಳನ್ನು ಎಲ್ಲಿಂದ ಪಡೆಯುತ್ತಾರೆಂದು ನಮಗೆ ತಿಳಿದಿದೆ. ಆದರೆ ನಮಗೆ ಜನರ ಮೇಲೆ ನಮಗೆ ನಂಬಿಕೆ ಇದೆ. ಅವರು ನ್ಯಾಯ ಒದಗಿಸುತ್ತಾರೆ. ಯಾರು ಉತ್ತಮ ಎಂದು ಜನರೇ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಜಂಗಲ್‌ ರಾಜ್‌ ಆಡಳಿತ ಮತ್ತೆ ಬರದಂತೆ ತಡೆಯಲು ಇವಿಎಂನಲ್ಲಿ ಕಮಲದ ಚಿಹ್ನೆಯಿರುವ ಬಟನ್‌ ಅನ್ನು ಒತ್ತಿ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ಎನ್‌ಡಿಎ ಮೈತ್ರಿಕೂಟವು ತಮ್ಮ ದೀರ್ಘಾವಧಿಯ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಹಾಗೂ ಒಳನುಸುಳುವಿಕೆಯನ್ನು ಪರಿಹರಿಸುವಲ್ಲಿ ವಿಫಲವಾದ್ದದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಜಂಗಲ್ ರಾಜ್ ಹಳೆಯ ವಿಷಯ. 20 ವರ್ಷಗಳಲ್ಲಿ ಅವರು ಜಂಗಲ್ ರಾಜ್ ಅನ್ನು ಏಕೆ ಅಂತ್ಯಗೊಳಿಸಿಲಿಲ್ಲ. ಒಳನುಸುಳುಕೋರರನ್ನು ಏಕೆ ಹೊರಹಾಕಲಿಲ್ಲ?, ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವೈಫಲ್ಯವಲ್ಲವೇ?. ಈ ವೈಫಲ್ಯಕ್ಕಾಗಿ ನಾನು ಅವರ ಡಬಲ್ ಎಂಜಿನ್ ಸರ್ಕಾರವನ್ನು ಖಂಡಿಸುತ್ತೇನೆ ಎಂದಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 160 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದ್ದರು. ಅಲ್ಲದೇ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ‘15 ವರ್ಷಗಳ ಲಾಲೂ–ರಾಬ್ರಿ ‘ಜಂಗಲ್‌ ರಾಜ್‌’ ಆಳ್ವಿಕೆಯಲ್ಲಿ ಬಿಹಾರವನ್ನು ಸಂಪೂರ್ಣವಾಗಿ ನಾಶಗೊಳಿಸಲಾಯಿತು. ಜಂಗಲ್‌ ರಾಜ್‌ ಮತ್ತೆ ಬರದಂತೆ ತಡೆಯಲು ಕಮಲದ ಚಿಹ್ನೆಗೆ ಮತ ಹಾಕಬೇಕಿದೆ’ ಎಂದು ಹೇಳಿದ್ದರು.

‘ನವೆಂಬರ್ 6ರ ಮತದಾನ ದಿನದಂದು ನೀವು ಕಮಲದ ಚಿಹ್ನೆಗೆ ಮತ ಹಾಕದೆ ತಪ್ಪು ಮಾಡಿದರೆ, ಮತ್ತೆ ಬಿಹಾರದಲ್ಲಿ ಕೊಲೆ, ಲೂಟಿ, ಅಪಹರಣ, ಸುಲಿಗೆ ಸಾಮಾನ್ಯ ಸಂಗತಿಗಳಾಗುತ್ತವೆ’ ಎಂದೂ ಎಚ್ಚರಿಸಿದ್ದರು.

ಬಿಹಾರದಲ್ಲಿ ಮೊದಲ ಹಂತದ ಮತದಾನ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ನವೆಂಬರ್ 11 ರಂದು ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.