ADVERTISEMENT

ಸೈನಿಕ ಶಾಲೆಗಳ ಖಾಸಗೀಕರಣ ವಿರುದ್ಧ ಮುರ್ಮುಗೆ ಖರ್ಗೆ ಪತ್ರ

ಪಿಟಿಐ
Published 10 ಏಪ್ರಿಲ್ 2024, 16:26 IST
Last Updated 10 ಏಪ್ರಿಲ್ 2024, 16:26 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ದೇಶದಲ್ಲಿರುವ ಸೈನಿಕ ಶಾಲೆಗಳನ್ನು ಖಾಸಗೀಕರಣಗೊಳಿಸುವ ನಡೆ ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ.

ಈ ಯೋಜನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಮತ್ತು ಈ ನಿಟ್ಟಿನಲ್ಲಿ ಮಾಡಿಕೊಳ್ಳಲಾಗಿರುವ ಒಪ್ಪಂದಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ದೇಶದಲ್ಲಿ 33 ಸೈನಿಕ ಶಾಲೆಗಳಿವೆ. ಇವುಗಳನ್ನು ರಕ್ಷಣಾ ಸಚಿವಾಲಯದ ಅಡಿ ಇರುವ ಸೈನಿಕ ಶಾಲಾ ಸೊಸೈಟಿ (ಎಸ್‌ಎಸ್ಎಸ್‌) ಎಂಬ ಸ್ವಾಯತ್ತ ಸಂಸ್ಥೆ ನಡೆಸುತ್ತಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಪಕ್ಷ ರಾಜಕೀಯದಿಂದ ಸಶಸ್ತ್ರ ಪಡೆಗಳನ್ನು ಭಾರತೀಯ ಪ್ರಜಾಪ್ರಭುತ್ವವು ಪ್ರಜ್ಞಾಪೂರ್ವಕವಾಗಿ ದೂರ ಇರಿಸಿದೆ. ಆದರೆ, ಕೇಂದ್ರ ಸರ್ಕಾರವು ಈ ಸಂಪ್ರದಾಯವನ್ನು ಉಲ್ಲಂಘಿಸಿದೆ ಎಂದಿದ್ದಾರೆ. 

ಒಂದಾದ ನಂತರ ಒಂದು ಸಂಸ್ಥೆಯ ಶಕ್ತಿಗುಂದಿಸಿದ ಬಳಿಕ, ಸಶಸ್ತ್ರ ಪಡೆಗಳ ಮೇಲೆ ತನ್ನ ಸಿದ್ಧಾಂತವನ್ನು ಹೇರಲು ಆರ್‌ಎಸ್‌ಎಸ್‌ ಈ ಯೋಜನೆ ಹಾಕಿಕೊಂಡಿದೆ. ಈ ರೀತಿಯ ಸಂಸ್ಥೆಗಳ ಮೇಲೆ ಸಿದ್ಧಾಂತ ಹೇರಿದರೆ ಅದು ಎಲ್ಲರ ಒಳಗೊಳ್ಳುವಿಕೆಯನ್ನು ಹಾಳುಗೆಡವುತ್ತದೆ. ಅಲ್ಲದೇ, ಧಾರ್ಮಿಕ, ಕಾರ್ಪೊರೇಟ್‌, ಕುಟುಂಬ, ಸಾಮಾಜಿಕ ಮತ್ತು ಸಾಂಸ್ಕೃತಿಕ ನಡವಳಿಕೆಗಳನ್ನು ಸೈನಿಕ ಶಾಲೆಗಳ ಮೇಲೆ ಹೇರುವ ಮೂಲಕ ಆ ಶಾಲೆಗಳ ‘ರಾಷ್ಟ್ರೀಯ ಮಾನ್ಯತೆ’ಗೂ ಧಕ್ಕೆಯಾಗುತ್ತದೆ ಎಂದಿದ್ದಾರೆ.

‘ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸೈನಿಕ ಶಾಲೆಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಕಾಂಗ್ರೆಸ್‌ ಆಗ್ರಹಿಸುತ್ತದೆ. ಹೀಗೆ ಮಾಡುವುದರಿಂದ ಸೈನಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ದೇಶಸೇವೆ ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಮನೋಭಾವ, ದೃಷ್ಟಿಕೋನ ಬೆಳೆಸಿಕೊಳ್ಳುತ್ತಾರೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಮಾಹಿತಿ ಹಕ್ಕಿನಡಿ ಆಧಾರದ ಮೇಲೆ ಪ್ರಕಟವಾಗಿರುವ ತನಿಖಾ ವರದಿ ಅನ್ವಯ, ಸೈನಿಕ ಶಾಲೆಗಳನ್ನು  ಸಾರ್ವಜನಿಕ– ಖಾಸಗಿ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿ ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಖರ್ಗೆ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ. ‘ಶೇ 62ರಷ್ಟು ಸೈನಿಕ ಶಾಲೆಗಳು ಬಿಜೆಪಿ– ಆರ್‌ಎಸ್‌ಎಸ್‌ ನಾಯಕರ ಮಾಲೀಕತ್ವದಲ್ಲಿವೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.