ADVERTISEMENT

ತಮಿಳುನಾಡು: ಜಾತಿಯ ಕಾರಣ ನೀಡಿ ಮಕ್ಕಳಿಗೆ ಮಿಠಾಯಿ ನಿರಾಕರಣೆ– ಇಬ್ಬರ ಬಂಧನ

ತಮಿಳುನಾಡು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 16:06 IST
Last Updated 17 ಸೆಪ್ಟೆಂಬರ್ 2022, 16:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಅಂಗಡಿಯ ಮಾಲೀಕನೊಬ್ಬ ಜಾತಿಯ ಕಾರಣ ನೀಡಿ ನಿರ್ದಿಷ್ಟ ಸಮುದಾಯವೊಂದರ ಮಕ್ಕಳಿಗೆ ಮಿಠಾಯಿ ನೀಡಲು ನಿರಾಕರಿಸಿದ್ದು, ಈ ಸಂಬಂಧ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ.

ತೆಂಕಾಸಿ ಜಿಲ್ಲೆಯ ಕೆ.ವಿ.ನಲ್ಲೂರು ಪ್ರದೇಶದಲ್ಲಿರುವ ಆದಿ ದ್ರಾವಿಡರ್‌ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮಿಠಾಯಿ ಹಾಗೂ ಇತರ ತಿನಿಸುಗಳನ್ನು ಕೊಳ್ಳಲು ಹತ್ತಿರದ ಅಂಗಡಿಗೆ ಹೋಗಿದ್ದರು. ಆಗ ಅಂಗಡಿ ಮಾಲೀಕ ಮಹೇಶ್ವರನ್‌ ಮಿಠಾಯಿ ನೀಡಲು ನಿರಾಕರಿಸಿದ್ದರು. ನೀವು ಇನ್ನೆಂದೂ ಅಂಗಡಿ ಹತ್ತಿರ ಬರಬಾರದು ಎಂದು ಮಕ್ಕಳಿಗೆ ತಾಕೀತು ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಆಧಾರದಲ್ಲಿ ಪೊಲೀಸರು ಮಹೇಶ್ವರನ್‌ ಹಾಗೂಗ್ರಾಮದ ಮುಖ್ಯಸ್ಥ ರಾಮಚಂದ್ರ ಮೂರ್ತಿ ಎಂಬುವರನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿಸಿದ್ದಾರೆ.

‘ಇಲ್ಲಿನ ಯಾವ ಅಂಗಡಿಯಲ್ಲೂ ನೀವು ಮಿಠಾಯಿ ಖರೀದಿಸುವಂತಿಲ್ಲ. ನಿಮಗೆ ಯಾವುದೇ ಬಗೆಯ ತಿನಿಸುಗಳನ್ನೂ ನೀಡಬಾರದೆಂಬ ನಿರ್ಬಂಧವಿದೆ. ಅಂಗಡಿಯವರು ನಮಗೆ ತಿನಿಸುಗಳನ್ನು ಕೊಡುತ್ತಿಲ್ಲವೆಂದು ನಿಮ್ಮ ಮನೆಯವರಿಗೆ ಹೋಗಿ ಹೇಳಿ. ಇಲ್ಲಿ ನಿಲ್ಲಬೇಡಿ. ಈಗ ಶಾಲೆಗೆ ಹೊರಡಿ’ ಎಂದು ಅಂಗಡಿ ಮಾಲೀಕ ಹೇಳಿರುವುದು ವಿಡಿಯೊದಲ್ಲಿದೆ.

ADVERTISEMENT

‘ನಿರ್ಬಂಧ, ಯಾವ ನಿರ್ಬಂಧ’ ಎಂದು ಬಾಲಕನೊಬ್ಬ ಮುಗ್ದತೆಯಿಂದ ಕೇಳಿದಾಗ ‘ನಿಮ್ಮ ಬೀದಿಯ ಜನರಿಗೆ ಯಾವುದೇ ಬಗೆಯ ತಿನಿಸುಗಳನ್ನು ನೀಡಬಾರದೆಂದು ಗ್ರಾಮದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈಗ ಹೊರಡಿ ಎಂದು ಮಾಲೀಕ ಹೇಳಿದ ನಂತರ ಬಾಲಕರು ಬರಿಗೈಯಲ್ಲಿ ಅಲ್ಲಿಂದ ಹೊರಡುವ ದೃಶ್ಯ ವಿಡಿಯೊದಲ್ಲಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂತು. ಇದರ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದೇವೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತೆಂಕಾಸಿ ಜಿಲ್ಲಾ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಮಿಳುನಾಡು ಸರ್ಕಾರವು ಇ.ವಿ.ಆರ್‌.ಪೆರಿಯಾರ್‌ ಅವರ ಜನ್ಮದಿನವನ್ನು (ಸೆ.17) ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಿದ ಸಂದರ್ಭದಲ್ಲೇ ಈ ವಿಡಿಯೊ ಹರಿದಾಡಿದೆ. ರಾಜ್ಯದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದಕ್ಕೆ ಇದು ಉದಾಹರಣೆಯಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.