ದಯವಿಟ್ಟು ವಾಪಸ್ ಆಗಿ: ನೇಪಾಳ ವಿದ್ಯಾರ್ಥಿಗಳಲ್ಲಿ ಕೆಐಐಟಿ ಸಂಸ್ಥಾಪಕ ಅಚ್ಯುತ ಸಮಂತಾ ಮನವಿ
( ಚಿತ್ರ ಕೃಪೆ– X/@KIITUniversity)
ಭುವನೇಶ್ವರ: ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥಾಪಕ ಅಚ್ಯುತ ಸಮಂತಾ ಅವರು ನೇಪಾಳದ ವಿದ್ಯಾರ್ಥಿಗಳ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಕ್ಯಾಂಪಸ್ ಖಾಲಿ ಮಾಡಿದ ವಿದ್ಯಾರ್ಥಿಗಳು ವಾಪಸ್ ಆಗುವಂತೆ ಅವರು ಮನವಿ ಮಾಡಿದ್ದಾರೆ.
ಕೆಐಐಟಿಯಲ್ಲಿ 3ನೇ ವರ್ಷದ ಬಿಟೆಕ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿಯಾಗಿದ್ದ ಪ್ರಕೃತಿ ಲಮ್ಸಾಲ್ (20) ಭಾನುವಾರ ಮಧ್ಯಾಹ್ನ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಒಡಿಶಾ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಶುಕ್ರವಾರ ತನ್ನ ಮುಂದೆ ಹಾಜರಾಗುವಂತೆ ಸಮಂತಾ ಅವರಿಗೆ ಸಮನ್ಸ್ ನೀಡಿತ್ತು. ಸಮನ್ಸ್ ನೀಡಿದ ಕೆಲ ಗಂಟೆಗಳ ನಂತರ, ಘಟನೆಯ ಕುರಿತು ಸಮಂತಾ ಅವರ ಮೊದಲ ಸಾರ್ವಜನಿಕ ಹೇಳಿಕೆಯ ವಿಡಿಯೋವನ್ನು ಕೆಐಐಟಿಯ 'ಎಕ್ಸ್' ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ವಿದ್ಯಾರ್ಥಿಗಳು ಮತ್ತು ಇಬ್ಬರು ನೇಪಾಳ ರಾಯಭಾರ ಕಚೇರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಮಂತಾ, 'ಫೆ.16ರಂದು ರಾತ್ರಿ ನಡೆದ ದುರದೃಷ್ಟಕರ ಘಟನೆಯ ಬಗ್ಗೆ ನಾವೆಲ್ಲರೂ ತುಂಬಾ ವಿಷಾದಿಸುತ್ತೇವೆ ಮತ್ತು ದುಃಖಿತರಾಗಿದ್ದೇವೆ. ನನಗೂ ವೈಯಕ್ತಿಕವಾಗಿ ದುಃಖವಾಗಿದೆ. ಘಟನೆ ಸಂಬಂಧ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದೇವೆ' ಎಂದು ಹೇಳಿದ್ದಾರೆ.
'ನಿಮ್ಮ ವಿಶ್ವವಿದ್ಯಾನಿಲಯವು ಶಾಂತವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ನಾವೆಲ್ಲರೂ ಸಂತೋಷವಾಗಿದ್ದೇವೆ. ಕೆಐಐಟಿಯಲ್ಲಿರುವ ನೇಪಾಳದ ಕೆಲವು ವಿದ್ಯಾರ್ಥಿಗಳು ಸಹ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದ್ದರಿಂದ ನೇಪಾಳದ ಎಲ್ಲಾ ಕೆಐಐಟಿ ವಿದ್ಯಾರ್ಥಿಗಳು ದಯವಿಟ್ಟು ತರಗತಿಗಳಿಗೆ ಹಾಜರಾಗುವಂತೆ ನಾನು ವಿನಂತಿ ಮಾಡುತ್ತೇನೆ‘ ಎಂದಿದ್ದಾರೆ.
'ಕೆಐಐಟಿಯಲ್ಲಿ ಓದುತ್ತಿರುವ ನೇಪಾಳದ ವಿದ್ಯಾರ್ಥಿಗಳ ಪೋಷಕರಲ್ಲಿಯೂ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಪ್ರೀತಿಯ ವಿದ್ಯಾರ್ಥಿಗಳೇ ದಯವಿಟ್ಟು ಶೀಘ್ರದಲ್ಲೇ ವಾಪಸ್ ಆಗಿ. ನಾವೆಲ್ಲರೂ ನಿಮ್ಮನ್ನು ನೋಡಲು ಕಾತುರರಾಗಿದ್ದೇವೆ' ಎಂದೂ ಅವರು ಹೇಳಿದ್ದಾರೆ.
ಕೆಐಐಟಿ 3ನೇ ವರ್ಷದ ಬಿಟೆಕ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿಯಾಗಿದ್ದ ಪ್ರಕೃತಿ ಲಮ್ಸಾಲ್ (20) ಭಾನುವಾರ ಮಧ್ಯಾಹ್ನ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಬಳಿಕ ನೇಪಾಳಿ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆಗ ಕ್ಯಾಂಪಸ್‌ನಲ್ಲಿ ಅಶಾಂತ ಪರಿಸ್ಥಿತಿ ತಲೆದೋರಿತ್ತು.
ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದರು.
ಪ್ರತಿಭಟನೆ ನಿರತ ಸುಮಾರು 1,000 ನೇಪಾಳಿ ವಿದ್ಯಾರ್ಥಿಗಳಿಗೆ ಅಮಾನತು ನೋಟಿಸ್ ನೀಡಿದ ಕೆಐಐಟಿ ಅಧಿಕಾರಿಗಳು ಕ್ಯಾಂಪಸ್ ತೊರೆಯುವಂತೆ ಸೂಚಿಸಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಸ್ತಕ್ಷೇಪದ ನಂತರ, ಕ್ಷಮೆಯಾಚಿಸಿದ ಕೆಐಐಟಿ ಅಧಿಕಾರಿಗಳು ನೇಪಾಳದ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮರಳುವಂತೆ ವಿನಂತಿಸಿದ್ದರು. ಅಲ್ಲದೇ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ 24/7 ಸಹಾಯ ಕೇಂದ್ರವನ್ನು ತೆರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.