
ಡೆಹ್ರಾಡೂನ್: ‘ನೇಪಾಳದಲ್ಲಿ ನಡೆದಂಥ ಘಟನೆಗಳು ಭಾರತದಲ್ಲಿ ಸಂಭವಿಸುವುದಿಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
‘ಭಾರತವನ್ನು ಅರ್ಥಮಾಡಿಕೊಳ್ಳದ ಜನರು ಮಾತ್ರ ದೇಶದಲ್ಲಿ ಮಿಲಿಟರಿ ಆಡಳಿತ ಅಥವಾ ನಾಗರಿಕ ದಂಗೆ ಸಂಭವಿಸಬಹುದು ಎನ್ನುತ್ತಾರೆ. ಆದರೆ ಇಂತಹ ಘಟನೆಗಳು ಎಂದಿಗೂ ಸಂಭವಿಸುವುದಿಲ್ಲ ಎಂಬ ಖಾತ್ರಿ ನನಗಿದೆ’ ಎಂದು ಈ ಹಿಂದಿನ ಸೋವಿಯತ್ ಒಕ್ಕೂಟ ಹಾಗೂ ನೆರೆಯ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಉದಾಹರಣೆಗಳನ್ನು ಉಲ್ಲೇಖಿಸಿ ಹೇಳಿದರು.
ಸೋಮವಾರ ಇಲ್ಲಿ ನಡೆದ ‘ಸ್ಪರ್ಶ್ ಹಿಮಾಲಯ ಮಹೋತ್ಸವ–2025’ರಲ್ಲಿ ಮಾತನಾಡಿದ ರಿಜಿಜು, ಇದಕ್ಕೆ ಎರಡು ಕಾರಣಗಳನ್ನು ಉಲ್ಲೇಖಿಸಿದರು. ‘ನಮ್ಮ ದೇಶದ ಸ್ವರೂಪ ಹಾಗೂ ಸಂವಿಧಾನವು ಜಗತ್ತಿನ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿರುವುದರಿಂದ, ನಮ್ಮಲ್ಲಿ ಅಂತಹ ವಿದ್ಯಮಾನ ಘಟಿಸಲ್ಲ’ ಎಂದರು.
‘ಜಗತ್ತಿನ ಇತರ ಭಾಗಗಳಿಗಿಂತ ನಾವು ಭಿನ್ನರಾಗಿದ್ದೇವೆ. ದೇಶ ವಿಭಜನೆ ಸಾಧ್ಯವಿಲ್ಲ. ಪ್ರಪಂಚದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಭಾರತ ಮಾತ್ರ ಸದಾಕಾಲ ಸುರಕ್ಷಿತವಾಗಿರುತ್ತದೆ’ ಎಂದು ಹೇಳಿದರು.
‘ಸಾಮಾಜಿಕ ಮಾಧ್ಯಮದಲ್ಲಿನ ‘ನಿರೂಪಣೆ’ಯನ್ನು ನಂಬದಿರಿ. ಈ ಬಗ್ಗೆ ಜಾಗರೂಕರಾಗಿರಿ’ ಎಂದು ಸಲಹೆ ನೀಡಿದರು.
‘ಭಾರತವನ್ನು ನಕಾರಾತ್ಮಕವಾಗಿ ಬಿಂಬಿಸಲು ಹಾಗೂ ಅಸ್ಥಿರಗೊಳಿಸಲು ದೇಶದ ಒಳಗೂ–ಹೊರಗೂ ಯತ್ನ ನಡೆದಿವೆ. ಇದರ ನಡುವೆಯೂ ರಾಷ್ಟ್ರವು ಪ್ರಗತಿ ಪಥದಲ್ಲಿ ಸಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.