ADVERTISEMENT

‘ಕಿಂಗ್’ ಆದ್ರೂ ನಿಯಮ ಪಾಲಿಸಿ: ರಸ್ತೆ ಸುರಕ್ಷತೆ ಸಂದೇಶವಾದ ಡಿಕ್ಕಿ ಪ್ರಸಂಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2024, 14:42 IST
Last Updated 29 ಡಿಸೆಂಬರ್ 2024, 14:42 IST
   

ತಿರುವನಂತಪುರ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಸ್ಯಾಮ್‌ ಕೋನ್‌ಸ್ಟಾಸ್‌ ಅವರ ಭುಜಕ್ಕೆ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರು ಡಿಕ್ಕಿ ಹೊಡೆದಿರುವ ಘಟನೆಯನ್ನೇ ಇಟ್ಟುಕೊಂಡು ಕೇರಳ ಪೊಲೀಸರು ರಸ್ತೆ ಸುರಕ್ಷತೆ ಬಗ್ಗೆ ‍‍‍ಸಂದೇಶ ನೀಡಿದ್ದಾರೆ.

ಡಿಕ್ಕಿ ಹೊಡೆದಿರುವ ವಿಡಿಯೋವನ್ನು ಪೋಸ್ಟ್‌ ಮಾಡಿರುವ ‍ಪೊಲೀಸರು, ‘ಕಿಂಗ್ ಆದ್ರೂ ಪರವಾಗಿಲ್ಲ, ಸಂಚಾರ ನಿಯಮವನ್ನು ಪಾಲಿಸಿ. ನೀವು ಸುರಕ್ಷಿತವಾಗಿರುವುದರ ಜೊತೆಗೆ ಇತರರನ್ನು ಸುರಕ್ಷಿತವಾಗಿರಿಸಿ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲಿ... ಸ್ಯಾಮ್‌ ಕೋನ್‌ಸ್ಟಾಸ್‌ ಅವರನ್ನು ಸರಿಯಾದ ಮಾರ್ಗದಲ್ಲಿ ಬರುತ್ತಿರುವ ವಾಹನ ಎಂದು ಚಿತ್ರಿಸಲಾಗಿದ್ದು, ವಿರಾಟ್ ಕೊಹ್ಲಿ ಅವರನ್ನು ತಪ್ಪು ಮಾರ್ಗದಲ್ಲಿ ಬರುತ್ತಿರುವ ವಾಹನ ಎಂದು ತೋರಿಸಲಾಗಿದೆ. ಕೋನ್‌ಸ್ಟಾಸ್‌ ಮತ್ತು ಕೊಹ್ಲಿ ಡಿಕ್ಕಿ ಆದ ತಕ್ಷಣ ‘ನಿಮ್ಮ ಲೇನ್‌ನಲ್ಲಿ ಇರಿ’ ಎಂಬ ಸಂದೇಶ ಕಾಣಿಸಿಕೊಂಡಿದೆ.

ADVERTISEMENT

ಕೇರಳ ಪೊಲೀಸರ ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಘಟನೆ ಏನು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್‌ನಲ್ಲಿ ಗುರುವಾರ ನಡೆದಿತ್ತು. ಟಾಸ್‌ ಗೆದ್ದ ಆತಿಥೇಯರು ಬ್ಯಾಟಿಂಗ್‌ ಆಯ್ದುಕೊಂಡಿದ್ದು, ಕೋನ್‌ಸ್ಟಾಸ್‌ ಹಾಗೂ ಅನುಭವಿ ಉಸ್ಮಾನ್‌ ಖ್ವಾಜಾ ಇನಿಂಗ್ಸ್‌ ಆರಂಭಿಸಿದ್ದರು.

ಇನಿಂಗ್ಸ್‌ನ 10ನೇ ಓವರ್‌ ವೇಳೆ ಪಿಚ್‌ನಲ್ಲಿ ಎದುರುಬದುರಾಗಿ ನಡೆದು ಹೋಗುತ್ತಿದ್ದಾಗ ಕೊಹ್ಲಿ ಮತ್ತು ಕೋನ್‌ಸ್ಟಾಸ್‌ ಅವರು ಭುಜಕ್ಕೆ ಭುಜ ತಾಗಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಖ್ವಾಜಾ ಹಾಗೂ ಫೀಲ್ಡ್‌ನಲ್ಲಿದ್ದ ಅಂಪೈರ್‌ಗಳು ಕೂಡಲೇ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದರು.

ದಿನದಾಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕೋನ್‌ಸ್ಟಾಸ್‌, ಕೊಹ್ಲಿ ಅವರು ತಮಗೆ ಗುದ್ದಿದ್ದು ಉದ್ದೇಶಪೂರ್ವಕವಾಗಿರಲಿಲ್ಲ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.