ADVERTISEMENT

ಕೋಲ್ಕತ್ತ: ದುರ್ಗಾಪೂಜೆಗೆ ಚಾಲನೆ

ಪಿಟಿಐ
Published 5 ಅಕ್ಟೋಬರ್ 2019, 20:00 IST
Last Updated 5 ಅಕ್ಟೋಬರ್ 2019, 20:00 IST
ಕೋಲ್ಕತ್ತದ ದುರ್ಗಾ ಪೂಜಾ ಪೆಂಡಾಲ್‌ ಒಂದರಲ್ಲಿ ಇಟ್ಟಿರುವ, ಪರಿಸರ ಮಾಲಿನ್ಯ ಮತ್ತು ಪ್ಲಾಸ್ಟಿಕ್‌ ಬಳಕೆಯ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಮೂರ್ತಿ
ಕೋಲ್ಕತ್ತದ ದುರ್ಗಾ ಪೂಜಾ ಪೆಂಡಾಲ್‌ ಒಂದರಲ್ಲಿ ಇಟ್ಟಿರುವ, ಪರಿಸರ ಮಾಲಿನ್ಯ ಮತ್ತು ಪ್ಲಾಸ್ಟಿಕ್‌ ಬಳಕೆಯ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಮೂರ್ತಿ   

ಕೋಲ್ಕತ್ತ: ನಗರದಲ್ಲಿ ಪ್ರತಿ ವರ್ಷವೂ ಭವ್ಯವಾಗಿ ನಡೆಯುವ ದುರ್ಗಾ ಪೂಜಾ ಉತ್ಸವಕ್ಕೆ ಶುಕ್ರವಾರ ಚಾಲನೆ ಲಭಿಸಿದ್ದು, ಮಂಗಳವಾರ (ವಿಜಯ ದಶಮಿಯಂದು) ‘ಅಪರಾಜಿತ ಪೂಜಾ’ದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

ಈ ಸಂದರ್ಭದಲ್ಲಿ ನಡೆಯುವ ವಿವಿಧ ಪೂಜೆ– ಪುನಸ್ಕಾರಗಳ ಬಗ್ಗೆ ಬಿನೋದ್‌ ಬೆಹರಿ ಪೂಜಾ ಸಮಿತಿಯು ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಈ ಬಾರಿ ದುರ್ಗೆಯ ಮೂರ್ತಿಗಳ ವಿಸರ್ಜನೆಯು ಬುಧವಾರ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.

ಈ ವರ್ಷ ಕೋಲ್ಕತ್ತದಲ್ಲಿ ಕನಿಷ್ಠ 170 ದುರ್ಗಾ ಪೂಜಾ ಪೆಂಡಾಲ್‌ಗಳನ್ನು ಹಾಕಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಪ್ರತಿ ಪೆಂಡಾಲ್‌ನಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.

ADVERTISEMENT

ಕೆಲವು ಪೆಂಡಾಲ್‌ಗಳಲ್ಲಿ ದುರ್ಗಾ ಮೂರ್ತಿಗಳನ್ನು ಬೆಳ್ಳಿಯ ಆಭರಣ ಹಾಗೂ ಇತರ ವಸ್ತುಗಳಿಂದ ಅಲಂಕರಿಸುವ ಸಂಪ್ರದಾಯವಿದ್ದು, ಈ ವರ್ಷ ಮೂರು ಪೆಂಡಾಲ್‌ಗಳಲ್ಲಿ ಹೊಸದಾಗಿ ಆ ಸಂಪ್ರದಾಯ ಆರಂಭಿಸ ಲಾಗಿದೆ.

ಛತ್ರಬಜಾರ್‌ ಸಮಿತಿಯು ನಿರ್ಮಿಸಿರುವ ಪೆಂಡಾಲ್‌ನಲ್ಲಿ ಸುಮಾರು 250 ಕೆ.ಜಿ. ಬೆಳ್ಳಿಯಿಂದ (₹ 2 ಕೋಟಿ ಮೌಲ್ಯ) ಮೂರ್ತಿಯನ್ನು ಅಲಂಕರಿಸಲಾಗಿದೆ.

ಅಂಗವಿಕಲರಿಗೂ ಪೆಂಡಾಲ್‌ ಒಳಗೆ ಬಂದು ಪೂಜೆ ಸಲ್ಲಿಸಲು ಸಾಧ್ಯವಾಗುವಂತೆ ಎಲ್ಲಾ ಪೆಂಡಾಲ್‌ಗಳಲ್ಲಿ ರ್‍ಯಾಂಪ್‌ ವ್ಯವಸ್ಥೆ ಮಾಡಲಾಗಿದೆ.

ರ್‍ಯಾಂಪ್‌ ಬಳಿಯಲ್ಲೇ ಕೆಲವು ಸ್ವಯಂಸೇವಕರು ನಿಂತು ಅಂಗವಿಕಲರಿಗೆ ನೆರವಾಗುವರು ಎಂದು ಸಮಿತಿಯವರು ತಿಳಿಸಿದ್ದಾರೆ.

ಮನೆಯಲ್ಲೇ ಉಳಿಯಲಿರುವ ಮಮತಾ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಾರಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ. ಐದು ದಿನಗಳ ದುರ್ಗಾ ಪೂಜೆ ಸಂದರ್ಭದಲ್ಲಿ ಅವರು ದಕ್ಷಿಣ ಕೋಲ್ಕತ್ತದಲ್ಲಿರುವ ತಮ್ಮ ನಿವಾಸದಲ್ಲಿ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹದ ಸ್ಥಿತಿ ಎದುರಾಗಿದ್ದು, ಮುಖ್ಯಮಂತ್ರಿ ಅವರು ಮನೆಯಲ್ಲೇ ಇದ್ದುಕೊಂಡು ಅಲ್ಲಿನ ಪರಿಸ್ಥಿತಿಗಳ ಅವಲೋಕನ ನಡೆಸುವರು. ಅಧಿಕಾರಿಗಳು ಅವರ ಮನೆಯಲ್ಲೇ ಇದ್ದು ಅವರಿಗೆ ಮಾಹಿತಿ ನೀಡುತ್ತಿರುತ್ತಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಅವರು 85 ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮಗಳನ್ನು ನಡೆಸಿದ್ದು 25 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದ ವಿಡಿಯೊ ಹಂಚಿಕೊಂಡಿದ್ದು, 30 ಲಕ್ಷ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.