ಸಂದೀಪ್ ಘೋಷ್
ಚಿತ್ರಕೃಪೆ: rgkarmch.in ಮತ್ತು ಪಿಟಿಐ
ಕೋಲ್ಕತ್ತ: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿರುವ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿದ ಬೆನ್ನಲ್ಲೇ, ಅವರನ್ನು ಅಮಾನತುಗೊಳಿಸಿ ರಾಜ್ಯ ಆರೋಗ್ಯ ಇಲಾಖೆ ಮಂಗಳವಾರ ಆದೇಶಿಸಿದೆ.
ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅವರನ್ನು ಸಿಬಿಐ ಬಂಧಿಸಿದೆ. ಕ್ರಿಮಿನಲ್ ತನಿಖೆ ಎದುರಿಸುತ್ತಿರುವ ಘೋಷ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಈ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಘೋಷ್ ಅವರನ್ನು ವಿಚಾರಣೆ ನಡೆಸಿದ್ದರು. ನಂತರ ಅವರನ್ನು ಬಂಧಿಸಲಾಯಿತು.
ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದ ಭೀಕರ ಹತ್ಯೆಯ ನಂತರದಲ್ಲಿ ಆಗಿರುವ ಎರಡನೆಯ ಬಂಧನ ಇದಾಗಿದೆ. ಈ ಮೊದಲು, ಕೋಲ್ಕತ್ತ ಪೊಲೀಸರು ಸಂಜಯ್ ರಾಯ್ ಎನ್ನುವವರನ್ನು ಬಂಧಿಸಿದ್ದರು. ನಂತರ ರಾಯ್ ಅವರನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.
ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣ ಬಯಲಾದ ನಂತರ ಘೋಷ್ ಅವರಿಗೆ ರಜೆ ಮೇಲೆ ತೆರಳುವಂತೆ ಪಶ್ಚಿಮ ಬಂಗಾಳ ಸರ್ಕಾರ ಸೂಚಿಸಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಘೋಷ್ ಅವರನ್ನು ಪ್ರಾಂಶುಪಾಲ ಹುದ್ದೆಯಿಂದ ಅಮಾನತು ಮಾಡದೆ, ಅವರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂಬ ಆರೋಪವನ್ನು ರಾಜ್ಯದ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಮಾಡಿದ್ದವು.
ಘೋಷ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಸಿಬಿಐ ಅಧಿಕಾರಿಗಳು, ಘೋಷ್ ಅವರ ಭದ್ರತಾ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಕೆಲವು ಪರಿಕರಗಳನ್ನು ಪೂರೈಸುತ್ತಿದ್ದ ಇಬ್ಬರು ವರ್ತಕರನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.