ADVERTISEMENT

ಕೆಪಿಸಿಸಿ ಅಧ್ಯಕ್ಷಗಿರಿಗೆ ಡಿ.ಕೆ.ಶಿವಕುಮಾರ್‌ ಲಾಬಿ?

ವಿಪಕ್ಷದ ನಾಯಕನ ಸ್ಥಾನದತ್ತಲೂ ಚಿತ್ತ...

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 19:45 IST
Last Updated 24 ಆಗಸ್ಟ್ 2019, 19:45 IST
.
.   

ನವದೆಹಲಿ: ಕೆಪಿಸಿಸಿ ಅಧ್ಯಕ್ಷಗಿರಿ ಅಥವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಗಳಲ್ಲಿ ಒಂದು ಹುದ್ದೆಯ ಮೇಲೆ ದೃಷ್ಟಿ ನೆಟ್ಟಿರುವ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌, ಈ ಸಂಬಂಧ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಕಳೆದ ಗುರುವಾರ ಪಕ್ಷ ಏರ್ಪಡಿಸಿದ್ದ ರಾಜೀವ್‌ಗಾಂಧಿ ಅವರ 75ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಮುಖಂಡರೊಂದಿಗೆ ದೆಹಲಿಗೆ ಆಗಮಿಸಿರುವ ಅವರು, ಮೂರು ದಿನಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ.

ಶುಕ್ರವಾರ ಪಕ್ಷದ ಮುಖಂಡ ಅಹಮದ್‌ ಪಟೇಲ್‌ ಅವರೊಂದಿಗೆ ಚರ್ಚಿಸಿ, ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ನೀಡುವಂತೆ ಮನವಿ ಸಲ್ಲಿಸಿರುವ ಅವರು, ಶನಿವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭೆ ಚುನಾವಣೆಯ ನೀರಸ ಫಲಿತಾಂಶದ ಕಾರಣ ಪಕ್ಷದ ಹೈಕಮಾಂಡ್‌, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬದಲಿಸುವ ಸಾಧ್ಯತೆ ಇರುವುದರಿಂದ ಆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾದರೂ ತಮ್ಮ ಹೆಸರನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಸಮ್ಮಿಶ್ರ ಸರ್ಕಾರ ಪತನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ದೇವೇಗೌಡ ಅವರ ನಡುವಿನ ವಾಕ್ಸಮರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ.ಶಿವಕುಮಾರ್‌, ‘ದೊಡ್ಡವರಿಗೆ ಸಂಬಂಧಿಸಿದ ಬೆಳವಣಿಗೆ ಬಗ್ಗೆ ಏನೂ ಹೇಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.