ADVERTISEMENT

ಶಾಹಿ ಈದ್ಗಾ ವಕ್ಫ್‌ ಆಸ್ತಿಯಲ್ಲ: ಹಿಂದೂಗಳ ವಾದ

ಪಿಟಿಐ
Published 22 ಏಪ್ರಿಲ್ 2024, 16:19 IST
Last Updated 22 ಏಪ್ರಿಲ್ 2024, 16:19 IST
ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ಹಾಗೂ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ 
ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ಹಾಗೂ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ    

ಪ್ರಯಾಗರಾಜ್: ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರದೇಶವು ವಕ್ಫ್‌ ಆಸ್ತಿಗೆ ಸಂಬಂಧಿಸಿದೆ ಎಂದು ಮುಸ್ಲಿಂ ಸಮುದಾಯದವರು ಮಂಡಿಸಿದ್ದ ವಾದವನ್ನು ಹಿಂದೂಗಳ ಪರ ವಕೀಲರು ಸೋಮವಾರ ಅಲ್ಲಗಳೆದರು.

‘ವಿವಾದಿತ ಆಸ್ತಿಯು ಹಿಂದೆ ದೇವಸ್ಥಾನವಾಗಿತ್ತು. ಅದನ್ನು ಬಲವಂತದಿಂದ ಸ್ವಾಧೀನಕ್ಕೆ ಪಡೆದ ನಂತರ ಅವರು ನಮಾಜ್ ಮಾಡಲು ಆರಂಭಿಸಿದರು. ಆದರೆ, ಹೀಗೆ ಮಾಡುವುದರಿಂದ ಈ ಸ್ಥಳದ ಸ್ವರೂಪವನ್ನು ಬದಲಿಸಲು ಆಗುವುದಿಲ್ಲ’ ಎಂದು ಹಿಂದೂಗಳ ಪರ ವಕೀಲರು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಾದಿಸಿದರು. ಆ ಜಾಗವು ವಕ್ಫ್‌ ಆಸ್ತಿ ಆಗಿರಲಿಲ್ಲ, ಹೀಗಾಗಿ ವಕ್ಫ್‌ ಕಾಯ್ದೆಯು ಅದಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.

ಇದು ವಕ್ಫ್‌ ಆಸ್ತಿ ಅಲ್ಲದಿರುವ ಕಾರಣ, ಇದರ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಅವರು ವಾದಿಸಿದರು. ‘ವಿವಾದಿತ ಶಾಹಿ ಈದ್ಗಾ ಮಸೀದಿಯು ವಕ್ಫ್‌ ಆಸ್ತಿಯಾಗಿರುವ ಕಾರಣ, ವಕ್ಫ್‌ ನ್ಯಾಯಮಂಡಳಿ ಮಾತ್ರವೇ ಇದಕ್ಕೆ ಸಂಬಂಧಿಸಿದ ತಕರಾರುಗಳನ್ನು ಆಲಿಸಬಹುದು’ ಎಂದು ಮುಸ್ಲಿಮರ ಪರ ವಕೀಲರು ವಾದಿಸಿದ್ದರು.

ADVERTISEMENT

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ವಿಚಾರಣೆಯನ್ನು ಏಪ್ರಿಲ್‌ 30ಕ್ಕೆ ನಿಗದಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.