ADVERTISEMENT

‘ತಮಿಳುನಾಡಿಗೆ ಹರಿಯುವ ಕಾವೇರಿ ಶುದ್ಧವಾಗಿರುವಂತೆ ನೋಡಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 19:30 IST
Last Updated 16 ಜುಲೈ 2018, 19:30 IST
ಕಾವೇರಿ ನದಿ
ಕಾವೇರಿ ನದಿ   

ನವದೆಹಲಿ: ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ನೀಡಿದ ವರದಿಯಲ್ಲಿ ತಿಳಿಸಿದೆ.

ಕಾವೇರಿ ನದಿಗೆ ಸೇರುವ ಚರಂಡಿ ನೀರು ಮತ್ತು ಕೈಗಾರಿಕಾ ತ್ಯಾಜ್ಯದಸಂಸ್ಕರಣಾ ಘಟಕಗಳನ್ನು ನವೀಕರಿಸಬೇಕು, ಅಗತ್ಯ ಮೂಲಸೌಕರ್ಯಗಳನ್ನು ರೂಪಿಸಬೇಕು. ಸಮಗ್ರವಾದ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ಮಂಡಳಿ ಹೇಳಿದೆ.

ನದಿ ನೀರಿನ ಗುಣಮಟ್ಟ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕಳೆದ ಏಪ್ರಿಲ್‌ನಲ್ಲಿ ನ್ಯಾಯಪೀಠ ನೀಡಿದ್ದ ನಿರ್ದೇಶನದ ಮೇರೆಗೆ ಮಂಡಳಿಯು ಸೋಮವಾರ ವರದಿ ಸಲ್ಲಿಸಿದೆ.

ADVERTISEMENT

ಕಾವೇರಿ ಮತ್ತು ಅದರ ಉಪನದಿಗಳಿಗೆ ಕರ್ನಾಟಕದಿಂದ ಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯ ಹರಿದು ಬರುತ್ತಿರುವುದನ್ನು ತಡೆಯುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎ. ಬೋಬಡೆ ಹಾಗೂ ಎಲ್‌.ನಾಗೇಶ್ವರರಾವ್‌ ಅವರಿದ್ದ ಪೀಠವು, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದೆ.

2017ರ ಸೆಪ್ಟೆಂಬರ್‌ನಿಂದ 2018ರ ಮೇವರೆಗಿನ ಅವಧಿಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ಪೆನ್ನಾರ್‌ ಮತ್ತು ಅರ್ಕಾವತಿ ನದಿಗಳು ಸಂಪೂರ್ಣ ಕಲುಷಿತಗೊಂಡಿರುವುದು ಬೆಳಕಿಗೆ ಬಂದಿದೆ. ಆದರೆ, ಕಾವೇರಿ ನದಿ ಅಷ್ಟಾಗಿ ಕಲುಷಿತ ಆಗಿಲ್ಲವಾದರೂ, 2017ರ ಅಕ್ಟೋಬರ್‌ನಿಂದ 2018ರ ಮೇ ಅವಧಿಯಲ್ಲಿ ಕೈಗೊಳ್ಳಲಾದ ಏಳು ಸುತ್ತಿನ ಪರಿಶೀಲನೆ ವೇಳೆ ನೀರಿನ ಗುಣಮಟ್ಟದ ಮಾನದಂಡಕ್ಕೆ ಅನುಗುಣವಾದ ಲಕ್ಷಣಗಳು ಕಾಣಿಸಿಕೊಳ್ಳದೆ, ತುಸು ಹೆಚ್ಚಿನ ಪ್ರಮಾಣದ ಮಾಲಿನ್ಯ ಕಂಡುಬಂದಿದೆ ಎಂದು ಮಂಡಳಿ ಸಲ್ಲಿಸಿರುವ ಜಂಟಿ ಮೇಲ್ವಿಚಾರಣಾ ವರದಿಯಲ್ಲಿ ತಿಳಿಸಲಾಗಿದೆ.

ಈ ರೀತಿಯ ಮಾಲಿನ್ಯ ಮುಂದುವರಿಯದಂತೆ ತಡೆಗಟ್ಟಲು ರಾಜ್ಯ ಸರ್ಕಾರ ಗಮನ ಹರಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ವಿಶೇಷವಾಗಿ ಅರ್ಕಾವತಿ ನದಿಯ ನೀರಿನ ಗುಣಮಟ್ಟವನ್ನು ಮೊದಲ ಸ್ಥಿತಿಗೆ ತರುವ ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ವರದಿ ಸಲಹೆ ಹೇಳಿದೆ.

ಕಾವೇರಿ ಮತ್ತು ಪೆನ್ನಾರ್‌ ನದಿಗಳ ಮಾಲಿನ್ಯವನ್ನು ತಡೆಗಟ್ಟುವ ವಿಷಯವನ್ನು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಅಂತರ-ರಾಜ್ಯ ಗಡಿಗಳಲ್ಲಿ ನೀರಿನ ಗುಣಮಟ್ಟ ಅಳೆಯುವ ಮೇಲ್ವಿಚಾರಣಾ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದೂ ಮಂಡಳಿ ಒತ್ತಿಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.