ನವದೆಹಲಿ ಮಣಿಪುರದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವುದೂ ಸೇರಿದಂತೆ ಹಲವು ನಿಯಮಗಳ ಕುರಿತ ಒಪ್ಪಂದಕ್ಕೆ ಸರ್ಕಾರ ಹಾಗೂ ಎರಡು ಪ್ರಮುಖ ಕುಕಿ ಸಂಘಟನೆಗಳು ಗುರುವಾರ ಸಹಿ ಹಾಕಿದವು.
‘ಕುಕಿ ರಾಷ್ಟ್ರೀಯ ಸಂಘಟಣೆ (ಕೆಎನ್‌ಒ) ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್) ಕಾರ್ಯಾಚರಣೆ ನಿಗ್ರಹ (ಎಸ್‌ಒಒ) ಒಪ್ಪಂದಕ್ಕೆ ಸಹಿ ಹಾಕಿವೆ. ಇದು ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಕುಕಿ ಗುಂಪುಗಳ ನಿಯೋಗದ ನಡುವೆ ನಡೆದ ಸರಣಿ ಸಭೆಗಳ ಬಳಿಕ ಈ ಒಪ್ಪಂದ ನಡೆದಿದೆ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಇಂದು ದೆಹಲಿಯಲ್ಲಿ ಗೃಹ ಸಚಿವಾಲಯ, ಮಣಿಪುರ ಸರ್ಕಾರ, ಕೆಎನ್‌ಒ ಮತ್ತು ಯುಪಿಎಫ್ ಪ್ರತಿನಿಧಿಗಳ ನಡುವೆ ತ್ರಿಪಕ್ಷೀಯ ಸಭೆ ನಡೆಯಿತು. ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ ಒಂದು ವರ್ಷದ ಅವಧಿಗೆ ಜಾರಿಗೆ ಬರುವಂತೆ ನಿಯಮಗಳು ಮತ್ತು ಷರತ್ತುಗಳ ಅನ್ವಯ ಎಲ್ಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ’ ಎಂದು ಗೃಹ ಸಚಿವಾಲಯ ತಿಳಿಸಿದೆ.
ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಮಾತುಕತೆಯ ಮೂಲಕ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ತರಲು ಎಲ್ಲರೂ ಒಪ್ಪಿಕೊಂಡಿದ್ದಾರೆ.
ಸಂಘರ್ಷ ಪೀಡಿತ ಪ್ರದೇಶಗಳಿಂದ ಏಳು ಶಿಬಿರಗಳನ್ನು ಸ್ಥಳಾಂತರಿಸಬೇಕು. ನಿರಾಶ್ರಿತರ ಶಿಬಿರಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಹತ್ತಿರದ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಶಿಬಿರಗಳಿಗೆ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಬೇಕು. ವಿದೇಶಿ ಪ್ರಜೆಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಮತ್ತು ಸಂಘಟನೆಯ ಸದಸ್ಯರನ್ನು ಭದ್ರತಾ ಪಡೆಗಳ ಕಟ್ಟುನಿಟ್ಟಿನ ತನಿಖೆಗೆ ಒಳಪಡಿಸಲು ಕೆಎನ್ಒ ಮತ್ತು ಯುಪಿಎಫ್ ಒಪ್ಪಿಕೊಂಡಿವೆ.
2008ರಲ್ಲಿ ಮೊದಲ ಬಾರಿಗೆ ಎಸ್ಒಒ ಒಪ್ಪಂದ ನಡೆದಿತ್ತು. ಬಳಿಕ ಅದನ್ನು ನಿಗದಿತ ಅವಧಿಗೆ ನವೀಕರಿಸಲಾಗುತ್ತಿತ್ತು. ಆದರೆ, ಜನಾಂಗೀಯ ಕಲಹದಿಂದಾಗಿ ಫೆಬ್ರುವರಿ 2024ರಿಂದ ಈ ಒಪ್ಪಂದ ಮುಂದುವರಿದಿರಲಿಲ್ಲ.
ಮೋದಿ ಭೇಟಿ ಸಾಧ್ಯತೆ: ಡ್ರೋನ್ ಹಾರಾಟ ನಿಷೇಧ ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಕೊನೆಯಲ್ಲಿ ಮಣಿಪುರಕ್ಕೆ ಭೇಟಿ ನಿಡಲಿರುವ ಸಾಧ್ಯತೆ ಇರುವುದರಿಂದ ‘ಚುರಾಚಾಂದಪುರ’ ಜಿಲ್ಲೆಯಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ವಿವಿಐಪಿ ಭೇಟಿ ಸಂದರ್ಭದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಯಲ್ಲಿ ‘ನೋ ಡ್ರೋನ್ ಝೋನ್’ (ಡ್ರೋನ್ ಹಾರಾಟ ನಿಷೇಧಿತ ವಲಯ) ಘೋಷಿಸಲಾಗಿದೆ. ಡ್ರೋನ್‌ಗಳು ಯುಎವಿ ಹಾಗೂ ಬಲೂನ್‌ಗಳು ಸೇರಿದಂತೆ ಯಾವುದೇ ರೀತಿಯ ವಾಯುಯಾನ ಸಾಧನಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಧರುಣ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ರೈಲು ಯೋಜನೆ ಉದ್ಘಾಟನೆಗೆ ಮಿಜೋರಾಂಗೆ ಭೇಟಿ ನೀಡಲಿರುವ ಮೋದಿ ಅವರು ಆ ಬಳಿಕ ಮಣಿಪುರಕ್ಕೆ ಸೆ.13ರಂದು ಬರುವ ಸಾಧ್ಯತೆ ಇದೆ ಎಂದು ಐಜ್ವಾಲ್‌ನ ಅಧಿಕಾರಿಗಳು ಹೇಳಿದ್ದಾರೆ. ಮಣಿಪುರಕ್ಕೆ ಮೋದಿ ಅವರು ಭೇಟಿ ನೀಡುವ ಕುರಿತು ಬಿಜೆಪಿ ಅಥವಾ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಕೆಜಡ್‌ಸಿ ಜೊತೆಗೂ ಒಪ್ಪಂದ
ಕೇಂದ್ರ ಸರ್ಕಾರ ಮತ್ತು ಮಣಿಪುರ ಆಡಳಿತವು ನಾಗರಿಕ ಗುಂಪು ಕುಕಿ-ಜೋ ಕೌನ್ಸಿಲ್ (ಕೆಜೆಡ್‌ಸಿ) ಸಂಘಟನೆಯೊಂದಿಗೂ ಹೊಸ ಒಪ್ಪಂದ ಮಾಡಿಕೊಂಡಿವೆ. ‘ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಬಂಡುಕೋರರ ನೆಲೆಗಳನ್ನು ಸ್ಥಳಾಂತರಿಸಲು ಮಣಿಪುರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-02 ಅನ್ನು ಪ್ರಯಾಣಿಕರು ಮತ್ತು ಅಗತ್ಯ ವಸ್ತುಗಳ ಸಂಚಾರಕ್ಕೆ ಮುಕ್ತಗೊಳಿಸಲು. ಸರ್ಕಾರ ನಿಯೋಜಿಸಿರುವ ಭದ್ರತಾ ಪಡೆಗಳೊಂದಿಗೆ ಸಹಕರಿಸಲು ಕೆಜಡ್‌ಸಿ ಬದ್ಧವಾಗಿದೆ’ ಎಂದು ಗೃಹಸಾಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.