ADVERTISEMENT

ವಿಚಾರಣೆಗೆ ಹಾಜರಾಗದ ಕುನಾಲ್ ಕಾಮ್ರಾ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 2:10 IST
Last Updated 1 ಏಪ್ರಿಲ್ 2025, 2:10 IST
<div class="paragraphs"><p> ಏಕನಾಥ ಶಿಂದೆ ಮತ್ತು&nbsp;ಕುನಾಲ್ ಕಾಮ್ರಾ</p></div>

ಏಕನಾಥ ಶಿಂದೆ ಮತ್ತು ಕುನಾಲ್ ಕಾಮ್ರಾ

   

ಮುಂಬೈ: ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿ ವಿಡಂಬನೆಯ ವಿಡಿಯೊ ಒಂದರಲ್ಲಿ ‘ವಂಚಕ’ ಎಂದು ಕರೆದಿದ್ದು ವಿವಾದ ಸೃಷ್ಟಿಸಿ ವಾರ ಕಳೆದಿದ್ದರೂ, ಕಾಮ್ರಾ ಅವರು ಮುಂಬೈ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿಲ್ಲ.

ಕಾಮ್ರಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಮತ್ತೆ ಸಮನ್ಸ್ ನೀಡಲಾಗಿದೆ. ಕಾಮ್ರಾ ಅವರು ಈಗ ತಮಿಳುನಾಡಿನ ವಿಲ್ಲುಪುರಂ ಪಟ್ಟಣದಲ್ಲಿ ಇದ್ದಾರೆ. ಅವರಿಗೆ ಕೆಲವು ವರ್ಷಗಳ ಹಿಂದೆ ಇಲ್ಲಿ ಸ್ಥಳಾಂತರಗೊಂಡಿದ್ದಾರೆ. ಕಾಮ್ರಾ ಅವರಿಗೆ ಮದ್ರಾಸ್ ಹೈಕೋರ್ಟ್‌ ಏಪ್ರಿಲ್‌ 7ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ADVERTISEMENT

ಕಾಮ್ರಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಮುಂಬೈ ಪೊಲೀಸರ ತಂಡವೊಂದು ಕಾಮ್ರಾ ಅವರು ದಾದರ್‌ನಲ್ಲಿ ಹೊಂದಿರುವ ಮನೆಗೆ ಭೇಟಿ ನೀಡಿತ್ತು.

ಈ ನಡುವೆ ಎಕ್ಸ್‌ ಮೂಲಕ ಪೋಸ್ಟ್‌ ಒಂದನ್ನು ಬರೆದಿರುವ ಕಾಮ್ರಾ, ‘ನಾನು 10 ವರ್ಷಗಳಿಂದ ವಾಸಿಸುತ್ತ ಇಲ್ಲದ ವಿಳಾಸಕ್ಕೆ ಹೋಗುವುದರಿಂದ ನಿಮ್ಮ ಸಮಯ ಮತ್ತು ಸಾರ್ವಜನಿಕ ಸಂಪನ್ಮೂಲ ಪೋಲಾಗುತ್ತದೆ’ ಎಂದು ಹೇಳಿದ್ದಾರೆ.

ಯುವಸೇನಾ ನಾಯಕ ರಾಹುಲ್ ಕನಲ್ ಅವರು ಕಾಮ್ರಾ ಅವರನ್ನು ಉದ್ದೇಶಿಸಿ ಮತ್ತೆ ಪರೋಕ್ಷವಾಗಿ ಬೆದರಿಕೆಯ ಮಾತು ಆಡಿದ್ದಾರೆ. ‘ಅವರಿಗೆ ಸಮಾಧಾನ ತಂದಿರುವ ಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಏಪ್ರಿಲ್‌ 7ರವರೆಗೆ ಮಾತ್ರ ಅನ್ವಯವಾಗುತ್ತದೆ. ಅವರು ಕಾನೂನು ಪ್ರಕ್ರಿಯೆ ಎದುರಿಸಬೇಕು... ಅಲ್ಲಿ (ತಮಿಳುನಾಡು) ಅವರಿಗೆ ಯಾವುದೇ ಬಗೆಯಲ್ಲಿ ರಕ್ಷಣೆ ಇರಲಿ, ಅವರು ಮುಂಬೈಗೆ ಬಂದಾಗ ಅವರನ್ನು ಶಿವಸೇನಾ ಶೈಲಿಯಲ್ಲಿ ಸ್ವಾಗತಿಸಲಾಗುತ್ತದೆ’ ಎಂದು ಕನಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.