ADVERTISEMENT

Kurnool Bus Fire: ಕ್ಷಣಾರ್ಧದಲ್ಲಿ ಆವರಿಸಿದ ಬೆಂಕಿ.. ಹಲವರು ಚಿರನಿದ್ರೆಗೆ...

ಪಿಟಿಐ
Published 24 ಅಕ್ಟೋಬರ್ 2025, 16:04 IST
Last Updated 24 ಅಕ್ಟೋಬರ್ 2025, 16:04 IST
   

ಕರ್ನೂಲು (ಆಂಧ್ರಪ್ರದೇಶ): ಪ್ರಯಾಣಿಕರೆಲ್ಲ ಗಾಢನಿದ್ರೆಯಲ್ಲಿದ್ದಾಗ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಕೆನ್ನಾಲಿಗೆಯ ಬಿಸಿ ತಾಗಿ, ಏನು ನಡೆಯುತ್ತಿದೆ ಎಂದು ಅರಿಯುವಷ್ಟರಲ್ಲಿಯೇ 19 ಜನರು ಸಜೀವ ದಹನವಾಗಿ, ಚಿರನಿದ್ರೆಗೆ ಜಾರಿದ್ದಾರೆ...

ಇದು, ಶುಕ್ರವಾರ ನಸುಕಿನಲ್ಲಿ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ, ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ನತದೃಷ್ಟ ಖಾಸಗಿ ಬಸ್‌ನಲ್ಲಿದ್ದವರು ದಾರುಣ ಅಂತ್ಯ ಕಂಡ ಬಗೆ. ಬೆಂಕಿಯ ತೀವ್ರತೆಗೆ ಸಂಪೂರ್ಣವಾಗಿ ಸುಟ್ಟುಹೋಗಿರುವ ಬಸ್‌, ಲೋಹದ ಅಸ್ಥಿಪಂಜರದಂತೆ ಕಾಣುತ್ತಿದೆ.

‘ನಮ್ಮಲ್ಲಿ ಕೆಲವರು ತಕ್ಷಣವೇ ಎಚ್ಚರಗೊಂಡರು. ಬೆಂಕಿ ಆವರಿಸಿಕೊಂಡಿದ್ದ ಬಸ್‌ನಿಂದ ಪಾರಾಗಲು ಹರಸಾಹಸಪಟ್ಟೆವು. ತುರ್ತು ನಿರ್ಗಮನದ ಗಾಜನ್ನು ಒಡೆದು ಹೊರಬಂದು ಜೀವ ಉಳಿಸಿಕೊಂಡೆವು’ ಎಂದು ಈ ಅವಘಡದಲ್ಲಿ ಬದುಕುಳಿದವರು ಆ ಭೀಕರ ಕ್ಷಣಗಳನ್ನು ಮೆಲುಕುಹಾಕಿದರು.

ADVERTISEMENT

ಜೀವ ಉಳಿಸಿಕೊಳ್ಳುವ ಈ ಪ್ರಯತ್ನದಲ್ಲಿ ಕೆಲವರಿಗೆ ಗಾಯಗಳೂ ಆಗಿವೆ. ಕೆಲವರು ಕಾಲುಗಳನ್ನು ಮುರಿದುಕೊಂಡಿದ್ದಾರೆ.

‘ನನಗೆ ಎಚ್ಚರವಾದಾಗ ಇಡೀ ಬಸ್‌ ಹೊತ್ತಿ ಉರಿಯುತ್ತಿತ್ತು. ಪ್ರಯಾಣಿಕರೊಬ್ಬರು ಅದಾಗಲೇ ಹಿಂದಿನ ಬಾಗಿಲನ್ನು ಮುರಿದಿದ್ದರು. ನಾವು ಕೆಲವರು ಆ ಬಾಗಿಲು ಮೂಲಕವೇ ಹೊರಜಿಗಿದು ಪ್ರಾಣ ಉಳಿಸಿಕೊಂಡೆವು. ನನ್ನ ಹಣೆಗೆ ಸಣ್ಣ ಗಾಯಗಳಾಗಿವೆ’ ಎಂದು ನೆಲ್ಲೂರಿನ ಎಸ್‌.ಹಾರಿಕಾ ಹೇಳಿದರು.

ವೃತ್ತಿಯಿಂದ ಐ.ಟಿ ಉದ್ಯೋಗಿಯಾಗಿರುವ ಹಾರಿಕಾ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

‘ನಾನು ಚೆನ್ನೈನಲ್ಲಿರುವ ಐ.ಟಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದು, ವೈಯಕ್ತಿಕ ಕಾರ್ಯದ ನಿಮಿತ್ತ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದೆ’ ಎಂದು ಹೇಳಿದರು.

‘ಐ.ಟಿ ಕಂಪನಿಯೊಂದರ ಸಂದರ್ಶನ ಶನಿವಾರ ಇತ್ತು. ಹೀಗಾಗಿ ಬೆಂಗಳೂರಿಗೆ ಹೊರಟಿದ್ದೆ. ತಡರಾತ್ರಿ 2.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. 15 ಅಡಿ ಎತ್ತರದಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡೆ. ನನ್ನ ಕಾಲುಗಳು ಮುರಿದಿವೆ. ಆದರೆ, ಶೀಘ್ರವೇ ಗುಣಮುಖನಾಗುವೆ ಎಂಬುದಾಗಿ ವೈದ್ಯರು ಹೇಳಿದ್ದಾರೆ’ ಎಂದು ಹೈದರಾಬಾದ್‌ ನಿವಾಸಿ ಸೂರ್ಯ ಹೇಳಿದರು. 

‘ನನ್ನ ಸಹಪ್ರಯಾಣಿಕ ನವೀನ್‌ ಕೂಡ ಐ.ಟಿ ಉದ್ಯೋಗಿ. ಆತ ಸಹ ಬಸ್‌ನಿಂದ ಜಿಗಿದು, ಪಾರಾಗಿದ್ದಾನೆ. ನನ್ನ ಪಕ್ಕದ ಹಾಸಿಗೆಯಲ್ಲಿ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮನ್ನು ಊರಿಗೆ ಕರೆದೊಯ್ಯಲು ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿದೆ’ ಎಂದೂ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.