
ಕರ್ನೂಲು: ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬುಟ್ಟಲ ಶಿವಶಂಕರ(21) ಎಂದು ಗುರುತಿಸಲಾಗಿದೆ.
ಜಿಲ್ಲೆಯ ಬಿ.ತಾಂಡ್ರಪಾಡು ಗ್ರಾಮದ ಶಿವಶಂಕರ ಅವರು ಅಮೃತಶಿಲೆ ಕತ್ತರಿಸುವುದು, ಕಟ್ಟಡಗಳಲ್ಲಿ ಅವುಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದರು.
‘ಸಮೀಪದ ಧೋನೆ ಪಟ್ಟಣದಲ್ಲಿ ಕೆಲಸಕ್ಕೆ ಹಾಜರಾಗುವುದಕ್ಕೆ ಶಿವಶಂಕರ ಹೊರಟಿದ್ದ. ಬೆಳಿಗ್ಗೆ 7.30ಕ್ಕೆ ಕೆಲಸದ ಸ್ಥಳದಲ್ಲಿ ಹಾಜರಿರಬೇಕಿತ್ತು. ಹೀಗಾಗಿ ರಾತ್ರಿಯೇ ಮನೆಯಿಂದ ಹೊರಟಿದ್ದ. ಕೆಲಹೊತ್ತು ಗೆಳೆಯರೊಂದಿಗೆ ಕಳೆದಿದ್ದ ಶಿವಶಂಕರ, ಮಳೆಯನ್ನು ಲೆಕ್ಕಿಸದೇ ಧೋನೆಯತ್ತ ಪ್ರಯಾಣ ಬೆಳೆಸಿದ್ದ’ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
‘ಅಮೃತಶಿಲೆ ಕತ್ತರಿಸುವುದು ಹಾಗೂ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುವುದಕ್ಕೂ ಮುನ್ನ ಶಿವಶಂಕರ ಬೈಕ್ ಮೆಕಾನಿಕ್ ಆಗಿದ್ದ. ಜೊತೆಗೆ, ಉತ್ತಮ ಬೈಕ್ ಸವಾರ ಕೂಡ ಆಗಿದ್ದ. ಕುಟುಂಬ ನಿರ್ವಹಣೆಗೆ ಆದಾಯ ಸಾಲದ ಕಾರಣ, ಆತ ಮಾರ್ಬಲ್ ಗುತ್ತಿಗೆದಾರರೊಬ್ಬರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ’ ಎಂದು ಮೃತ ಶಿವಶಂಕರ ಅವರ ಅಣ್ಣ ಶ್ರೀಹರಿ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಹರಿ, ‘ಬಸ್ ಅವಘಡಕ್ಕೆ ಸಂಬಂಧಿಸಿ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಚಿತ್ರವನ್ನು ಬೆಳಿಗ್ಗೆ 6.30ರ ವೇಳೆಗೆ ನೆರೆಮನೆಯವರೊಬ್ಬರು ತೋರಿಸಿದಾಗ, ಶಿವಶಂಕರ ಸಾವಿನ ಬಗ್ಗೆ ತಿಳಿಯಿತು. ಮೊದಲು ನಾವು ಈ ಸುದ್ದಿಯನ್ನು ನಂಬಲಿಲ್ಲ’ ಎಂದು ಕಣ್ಣೀರಿಟ್ಟರು.
‘ಕೆಲ ವರ್ಷಗಳ ಹಿಂದೆ ತಂದೆ ತೀರಿಕೊಂಡ ಬಳಿಕ, ತಾಯಿಯೊಂದಿಗೆ ನಾವಿಬ್ಬರು ಸಹೋದರರು ವಾಸಿಸುತ್ತಿದ್ದೆವು. ಈಗ ನಾನು ಮತ್ತು ನನ್ನ ತಾಯಿ ಮಾತ್ರ ಉಳಿದೆವು’ ಎಂದು ಗದ್ಗದಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.