ADVERTISEMENT

‘ಮತ್ತೆ ಮೈತ್ರಿ ಬಯಸಿದ್ದ ನಿತೀಶ್‌’

ಲಾಲು ಆತ್ಮಚರಿತ್ರೆಯಲ್ಲಿ ಬಿಹಾರದ ರಾಜಕೀಯ ವಿದ್ಯಮಾನ

ಅಭಯ್ ಕುಮಾರ್
Published 5 ಏಪ್ರಿಲ್ 2019, 18:25 IST
Last Updated 5 ಏಪ್ರಿಲ್ 2019, 18:25 IST
ಲಾಲು ಪ್ರಸಾದ್‌
ಲಾಲು ಪ್ರಸಾದ್‌   

ಪಟ್ನಾ: ‘ಬಿಹಾರದ ಮಹಾಮೈತ್ರಿಯಿಂದ ಹೊರನಡೆದು ಎನ್‌ಡಿಎ ಸೇರಿಕೊಂಡ ಆರು ತಿಂಗಳ ಬಳಿಕ ನಿತೀಶ್‌ ಕುಮಾರ್‌ ಅವರು ಪುನಃ ಮಹಾಮೈತ್ರಿ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದರು. ಆ ಕುರಿತು ಮಾತುಕತೆ ನಡೆಸಲು ಮಧ್ಯವರ್ತಿಯ ರೂಪದಲ್ಲಿ ಪ್ರಶಾಂತ್‌ ಕಿಶೋರ್‌ ನಮ್ಮ ಬಳಿಗೆ ಬಂದಿದ್ದರು’ ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ನೀಡಿರುವ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಪ್ರಶಾಂತ್‌ ಕಿಶೋರ್‌ (ಪಿ.ಕೆ.) ಹೇಳಿದ್ದಾರೆ.

ಲಾಲು ಪ್ರಸಾದ್‌ ಅವರ ಸದ್ಯದಲ್ಲೇ ಬಿಡುಗಡೆಯಾಗಲಿರುವ ಆತ್ಮಚರಿತ್ರೆ, ‘ಗೋಪಾಲ್‌ಗಂಜ್‌ ಟು ರೈಸಿನಾ’ದ ಆಯ್ದ ಭಾಗವು ಇಂಗ್ಲಿಷ್‌ ದೈನಿಕವೊಂದರಲ್ಲಿ ಪ್ರಕಟವಾಗಿದ್ದು ಅದರಲ್ಲಿ, ‘ಎನ್‌ಡಿಎ ಸೇರಿದ್ದ ನಿತೀಶ್‌ ಅವರು ಆರು ತಿಂಗಳಲ್ಲಿ ಎಷ್ಟು ಹತಾಶರಾಗಿದ್ದರೆಂದರೆ ಮತ್ತೆ ಮಹಾಮೈತ್ರಿಗೆ ಸೇರಿಕೊಳ್ಳುವ ಬಗ್ಗೆ ಮಾತುಕತೆ ನಡೆಸಲು ಪಿ.ಕೆ. ಅವರನ್ನು ಐದು ಬಾರಿ ನನ್ನ ಬಳಿ ಕಳುಹಿಸಿದ್ದರು’ ಎಂದಿರುವುದನ್ನು ಉಲ್ಲೇಖಿಸಲಾಗಿದೆ. ಅದಕ್ಕೆ ಪ್ರಶಾಂತ್‌ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕಿಶೋರ್‌, ಈಗ ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.

‘ಜೆಡಿಯುಗೆ ನಮ್ಮ ಪಕ್ಷ ಬೆಂಬಲ ನೀಡುವುದನ್ನು ಲಿಖಿತವಾಗಿ ಖಚಿತಪಡಿಸುವುದಾದರೆ ಎನ್‌ಡಿಎದಿಂದ ಹೊರ ಬರಲು ನಿತೀಶ್‌ ಸಿದ್ಧರಿದ್ದಾರೆ ಎಂದು ಕಿಶೋರ್‌ ನಮಗೆ ತಿಳಿಸಲು ಬಯಸಿದ್ದರು. ನಿತೀಶ್‌ ಬಗ್ಗೆ ನನಗೆ ಕೆಟ್ಟ ಭಾವನೆಗಳಿಲ್ಲ. ಆದರೆ ಅವರ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ. ಪಿ.ಕೆ. ಅವರ ಪ್ರಸ್ತಾವವನ್ನು ನಾನು ಒಪ್ಪಿಕೊಂಡರೆ, 2015ರಲ್ಲಿ ಮಹಾಮೈತ್ರಿಯ ಪರ ಮತ ಚಲಾಯಿಸಿದ ಜನರು ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ಗೊಂದಲ ನನ್ನೊಳಗೆ ಮೂಡಿತ್ತು’ ಎಂದು ಲಾಲು ಹೇಳಿಕೊಂಡಿದ್ದಾರೆ.

ADVERTISEMENT

ಲೇಖನವನ್ನು ಕುರಿತ ಮಾಹಿತಿ ಪಡೆಯಲು ಮಹಾಮೈತ್ರಿಯಲ್ಲಿದ್ದ ಮೂವರು ನಾಯಕರನ್ನು ‘ಪ್ರಜಾವಾಣಿ’ ಸಂಪರ್ಕಿಸಿದ್ದು, ‘ಲಾಲು ಅವರನ್ನು ಕಿಶೋರ್‌ ಐದು ಬಾರಿ ಭೇಟಿಯಾಗಿ ಮಾತುಕತೆ ನಡೆಸಿರುವುದು ನಿಜ’ ಎಂದು ಅವರೆಲ್ಲರೂ ಖಚಿತಪಡಿಸಿದ್ದಾರೆ.

‘ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾರಣವಾದ ಅರೋಪ ಹೊತ್ತಿದ್ದ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಪುತ್ರನನ್ನು ಬಂಧಿಸಲು 2018ರಲ್ಲಿ ಬಿಹಾರ ಪೊಲೀಸರು ಮುಂದಾಗಿದ್ದರು. ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನಿತೀಶ್‌ ಅವರು ಆ ಸಂದರ್ಭದಲ್ಲಿ ಪಶ್ಚಾತ್ತಾಪ ಪಟ್ಟಿದ್ದರಲ್ಲದೆ ಪುನಃ ಮಹಾಮೈತ್ರಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದರು’ ಎಂದು ಆರ್‌ಜೆಡಿಯ ಮಾಜಿ ಸಂಸದರೊಬ್ಬರು ಖಚಿತಪಡಿಸಿದ್ದಾರೆ.

ಆದರೆ ಇಂಥ ಬೆಳವಣಿಗೆಗಳನ್ನು ಅಲ್ಲಗಳೆದಿರುವ ಕಿಶೋರ್‌, ‘ಜೆಡಿಯು ಸೇರುವ ಮುನ್ನ ಅನೇಕ ಬಾರಿ ನಾನು ಲಾಲು ಅವರನ್ನು ಭೇಟಿಮಾಡಿದ್ದೆ. ಆ ಸಂದರ್ಭಗಳಲ್ಲಿ ನಮ್ಮಿಬ್ಬರ ನಡುವೆ ನಡೆದ ಮಾತುಕತೆಯನ್ನು ಬಹಿರಂಗಪಡಿಸಿದರೆ ಲಾಲು ಅವರಿಗೆ ಮುಜುಗರವಾದೀತು’ ಎಂದಿದ್ದಾರೆ.

ನಿತೀಶ್‌ ಕುಮಾರ್‌ ಅವರು 2015ರ ವಿಧಾನಸಭಾ ಚುನಾವಣೆಗೂ ಮುನ್ನ ಮಹಾಮೈತ್ರಿ ಸೇರಿಕೊಂಡಿದ್ದರು. ಈ ಒಕ್ಕೂಟವು ಬಿಹಾರದಲ್ಲಿ ಎನ್‌ಡಿಎಯನ್ನು ಸೋಲಿಸಿತ್ತು. ಮೈತ್ರಿಕೂಟದ ಅಭ್ಯರ್ಥಿಯಾಗಿ ನಿತೀಶ್‌ ಪುನಃ ಮುಖ್ಯಮಂತ್ರಿಯಾಗಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಲಾಲು ಅವರ ಪುತ್ರರ ಮೇಲೆ ಭೂ ಕಬಳಿಕೆ ಆರೋಪ ಕೇಳಿ ಬಂದಿತ್ತು. ಈ ಕಾರಣ ಮುಂದಿಟ್ಟ ನಿತೀಶ್‌, 2017ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಲ್ಲದೆ ಮಹಾಮೈತ್ರಿಯಿಂದ ಹೊರನಡೆದು ಮತ್ತೆ ಎನ್‌ಡಿಎ ಸೇರಿ ಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.