ADVERTISEMENT

ಲಖಿಂಪುರ ಖೇರಿ: ಆರೋಪಿಗಳ ಜೊತೆ ಸಂಬಂಧ ಕಲ್ಪಿಸಿ ಕಟ್ಟುಕತೆ ಹೆಣೆದ ಪೊಲೀಸರು- ಸಹೋದರ

ಪಿಟಿಐ
Published 18 ಸೆಪ್ಟೆಂಬರ್ 2022, 6:37 IST
Last Updated 18 ಸೆಪ್ಟೆಂಬರ್ 2022, 6:37 IST
ಲಖಿಂಪುರ ಖೇರಿ: ಅತ್ಯಾಚಾರ ಮತ್ತು ಕೊಲೆಯಾದ ಅಪ್ರಾಪ್ತ ಸಹೋದರಿಯರ ಪೈಕಿ ಓರ್ವಳ ಶವವನ್ನು ಶವಪರೀಕ್ಷೆಗೆ ಸಾಗಿಸುತ್ತಿರುವುದು | ಪಿಟಿಐ ಚಿತ್ರ
ಲಖಿಂಪುರ ಖೇರಿ: ಅತ್ಯಾಚಾರ ಮತ್ತು ಕೊಲೆಯಾದ ಅಪ್ರಾಪ್ತ ಸಹೋದರಿಯರ ಪೈಕಿ ಓರ್ವಳ ಶವವನ್ನು ಶವಪರೀಕ್ಷೆಗೆ ಸಾಗಿಸುತ್ತಿರುವುದು | ಪಿಟಿಐ ಚಿತ್ರ   

ನವದೆಹಲಿ: ಅಮ್ಮ ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಳಿಕ ಸಹೋದರಿಯರಿಬ್ಬರೂ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದರು ಎಂದು ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅಪಹರಣಗೊಂಡು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದವರ ಸಹೋದರ ಸ್ಮರಿಸಿಕೊಂಡಿದ್ದಾನೆ. ಇಬ್ಬರೂ ಮಹತ್ವಾಕಾಂಕ್ಷೆಯುಳ್ಳ ಹುಡುಗಿಯರಾಗಿದ್ದರು ಎಂದಿದ್ದಾನೆ.

ನನ್ನ ಇಬ್ಬರು ಸಹೋದರಿಯರನ್ನು ಕೊಲೆ ಮಾಡಿದವರಿಗೆ ಮರಣ ದಂಡನೆ ವಿಧಿಸಬೇಕು. ನಮಗೆ ನ್ಯಾಯ ಬೇಕು ಎಂದು 16 ವರ್ಷದ ಸಹೋದರ ಪಟ್ಟು ಹಿಡಿದಿದ್ದಾನೆ.

ಅನಾರೋಗ್ಯದಿಂದಿದ್ದ ಅಮ್ಮನನ್ನು ನೋಡಿಕೊಳ್ಳಲು 17 ವರ್ಷದ ಅಕ್ಕ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಳು. 6 ತಿಂಗಳ ಹಿಂದೆ ಅಮ್ಮ ಗರ್ಭಕೋಶಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಆರೈಕೆ ಮಾಡುವ ಸಲುವಾಗಿ ಅಕ್ಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಳು. 15 ವರ್ಷದ ತಂಗಿ 10ನೇ ತರಗತಿ ಓದುತ್ತಿದ್ದಳು. ಶಿಕ್ಷಣವನ್ನು ಪೂರ್ಣಗೊಳಿಸಿ ಉದ್ಯೋಗ ಹೊಂದಬೇಕು, ಮನೆಗೆ ಆಸರೆಯಾಗಬೇಕು ಎಂದು ಬಯಸಿದ್ದಳು. ಕಲಿಕೆಯಲ್ಲೂ ಮುಂದಿದ್ದಳು ಎಂದು ಸಹೋದರ ಕಂಬನಿ ಮಿಡಿದಿದ್ದಾನೆ.

ADVERTISEMENT

ದೆಹಲಿಯ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಹೋದರ ಕಳೆದ ತಿಂಗಳು ಮನೆಗೆ ವಾಪಸ್‌ ಆಗಿದ್ದ.

ಇಬ್ಬರು ಸಹೋದರಿಯರ ದೇಹಗಳು ಕಬ್ಬಿನ ಗದ್ದೆಯ ಸಮೀಪ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬುದು ಶವಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದೆ.

ಲಖಿಂಪುರ ಖೇರಿ ಎಸ್‌ಪಿ ಸಂಜೀವ್‌ ಸುಮನ್‌, ಕೊಲೆಯಾದ ಸಹೋದರಿಯರಿಗೆ ಆರೋಪಿಗಳ ಪೈಕಿ ಇಬ್ಬರ ಜೊತೆ ಸಂಬಂಧವಿತ್ತು. ಅವರು ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಹೇಳಿಕೆಯನ್ನು ಸಹೋದರ ಅಲ್ಲಗಳೆದಿದ್ದಾನೆ. ಆರೋಪಿಗಳನ್ನು ರಕ್ಷಿಸಲು ಮತ್ತು ಮುಜುಗರದಿಂದ ಪಾರಾಗಲು ಪೊಲೀಸರು ತಿರುಚಿದ ಕತೆಯನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

ಪೊಲೀಸರು ಕಟ್ಟುಕತೆಗಳನ್ನು ಹೇಳುತ್ತಿದ್ದಾರೆ. ಅವರು ಹೇಳುತ್ತಿರುವುದು ಸುಳ್ಳು. ನನ್ನ ಸಹೋದರಿಯರನ್ನು ಅಪಹರಿಸಲಾಗಿತ್ತು. ಅವರಿಗೆ ಅಪಹರಿಸಿದವರು ಪರಿಚಿತರಾಗಿರಲು ಸಾಧ್ಯವೇ ಇಲ್ಲ. ನಮಗೂ ಅವರು ಯಾರೂ ಗೊತ್ತಿಲ್ಲ. ನನ್ನ ಸಹೋದರಿಯರು ಅಪಾಯಕ್ಕೆ ಸಿಲುಕಿದ್ದಾರೆ ಎಂಬ ವಿಚಾರವೂ ನನಗೆ ಗೊತ್ತಿರಲಿಲ್ಲ ಎಂದು ಸಹೋದರ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.