ADVERTISEMENT

ಲಖಿಂಪುರ್–ಖೇರಿ ಹಿಂಸಾಚಾರ ಪ್ರಕರಣ: ಆರೋಪಿ ಆಶಿಶ್ ಮಿಶ್ರಾ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2022, 13:42 IST
Last Updated 15 ಫೆಬ್ರುವರಿ 2022, 13:42 IST
ಆಶಿಶ್ ಮಿಶ್ರಾ: ಪಿಟಿಐ ಚಿತ್ರ
ಆಶಿಶ್ ಮಿಶ್ರಾ: ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶದ ಲಖಿಂಪುರ್–ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರು ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಅವರಿಗೆ ಜಾಮೀನು ನೀಡಿತ್ತು. ಇಬ್ಬರಿಂದ ₹ 3 ಲಕ್ಷ ಮೌಲ್ಯದ ಜಾಮೀನಿನ ಬಾಂಡ್ ಪಡೆದು ಆಶಿಶ್ ಮಿಶ್ರಾ ಅವರನ್ನು ಬಿಡುಗಡೆ ಮಾಡಲಾಗಿದೆ.

ಉತ್ತರ ಪ್ರದೇಶದ ಲಖಿಂಪುರ್–ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಅಕ್ಟೋಬರ್ 9ರಂದು ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು. ಘಟನೆಯಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಸಾವಿಗೀಡಾಗಿದ್ದರು.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯ ಸಂದರ್ಭ ರೈತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಡಿಸಿಎಂ ಸ್ವಾಗತಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತರ ವಾಹನಗಳು ರೈತರ ಮೇಲೆ ಹರಿದು ನಾಲ್ವರು ಮೃತಪಟ್ಟಿದ್ದರು. ರೊಚ್ಚಿಗೆದ್ದ ರೈತರು ಪ್ರತಿ ದಾಳಿ ನಡೆಸಿದಾಗ ನಾಲ್ವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದರು.

ADVERTISEMENT

ರೈತರ ಮೇಲೆ ಹರಿದ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಇದ್ದರು ಎಂದು ರೈತರು ಆರೋಪಿಸಿದ್ದರು. ಆದರೆ, ಆಶಿಶ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.