ADVERTISEMENT

ಲಖಿಂಪುರ ಹಿಂಸೆ: ಆರೋಪಿಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಮಾಹಿತಿ ಸಲ್ಲಿಕೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 21:30 IST
Last Updated 7 ಅಕ್ಟೋಬರ್ 2021, 21:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಲಖಿಂಪುರ–ಖೇರಿಯಲ್ಲಿ ಕಳೆದ ಭಾನುವಾರ ನಡೆದ ‘ಎಂಟು ಮಂದಿಯ ಕೊಲೆ’ ಪ್ರಕರಣದ ಆರೋಪಿ ಗಳು ಯಾರು ಮತ್ತು ಅವರನ್ನು ಬಂಧಿಸ ಲಾಗಿದೆಯೇ ಎಂಬ ಮಾಹಿತಿ ಇರುವ ಸ್ಥಿತಿಗತಿ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಶುಕ್ರವಾರದ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

‘ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಯಾರ ಮೇಲೆ ಎಫ್‌ಐಆರ್‌ ದಾಖಲಿಸಲಾ
ಗಿದೆ, ಅವರನ್ನು ಬಂಧಿಸಲಾಗಿದೆಯೇ ಎಂಬ ಮಾಹಿತಿ ಬೇಕಾಗಿದೆ’ ಎಂದು ಉತ್ತರ ಪ್ರದೇಶದ ಪರವಾಗಿ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಗರಿಮಾ ಪ್ರಸಾದ್‌ ಅವರಿಗೆ ಪೀಠವು ಹೇಳಿತು.

ADVERTISEMENT

ಭಾನುವಾರ ನಡೆದ ಎಂಟು ಮಂದಿಯ ಹತ್ಯೆಗೆ ಸಂಬಂಧಿಸಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಬುಧವಾರ ದೂರು ದಾಖಲಿಸಿಕೊಂಡಿತು. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸುವಂತೆ ರಿಜಿಸ್ಟ್ರಿಗೆ ತಿಳಿಸಿದೆ. ವಕೀಲರಾದ ಶಿವಕುಮಾರ್‌ ತ್ರಿಪಾಠಿ ಮತ್ತು ಸಿ.ಎಸ್‌. ಪಂಡಾ ಅವರು ಪ್ರಕರಣದ ಬಗ್ಗೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಲಾಗಿದೆ. ವಿಚಾರಣೆ ಶುಕ್ರವಾರ ಮುಂದುವರಿಯಲಿದೆ.

‘ತಾಯಿಗೆ ಚಿಕಿತ್ಸೆ ಕೊಡಿ’

ಮೃತ ರೈತ ಲವ್‌ಪ್ರೀತ್‌ ಸಿಂಗ್‌ ಅವರ ತಾಯಿಗೆ ತಕ್ಷಣ ಚಿಕಿತ್ಸೆ ಕೊಡಿಸಬೇಕಾಗಿದೆ. ಈ ಚಿಕಿತ್ಸೆಗೆ ನೆರವಾಗುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ವಕೀಲರಾದ ಅಮೃತಪಾಲ್‌ ಸಿಂಗ್‌ ಖಾಲ್ಸಾ ವಿಚಾರಣೆ ಸಂದರ್ಭ ದಲ್ಲಿ ಕೋರಿದರು. ಮಗನನ್ನು ಕಳೆದುಕೊಂಡ ತಾಯಿಯು ಆಘಾತಗೊಂಡಿದ್ದಾರೆ ಎಂದರು.

ಈ ವಿಚಾರವನ್ನು ತಕ್ಷಣವೇ ರಾಜ್ಯ ಸರ್ಕಾರದ ಗಮನಕ್ಕೆ ತನ್ನಿ. ಅಗತ್ಯ ವೈದ್ಯಕೀಯ ನೆರವು ಸಿಗುವಂತೆ ನೋಡಿಕೊಳ್ಳಿ ಎಂದು ಪೀಠವು ಗರಿಮಾ ಪ್ರಸಾದ್‌ ಅವರಿಗೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.