ADVERTISEMENT

ಲಕ್ಷದ್ವೀಪ: ದಂಡ ವಿಧಿಸುವ ಕ್ರಮ ವಿರೋಧಿಸಿ ತೆಂಗು–ತಾಳೆ ಗರಿ ಹಿಡಿದು ಪ್ರತಿಭಟನೆ

ಪಿಟಿಐ
Published 28 ಜೂನ್ 2021, 7:50 IST
Last Updated 28 ಜೂನ್ 2021, 7:50 IST
ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಕೈಗೊಂಡ ಕ್ರಮಗಳನ್ನು ವಿರೋಧಿಸಿ ನಾಗರಿಕರ ಪ್ರತಿಭಟನೆ (ಸಂಗ್ರಹ ಚಿತ್ರ)
ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಕೈಗೊಂಡ ಕ್ರಮಗಳನ್ನು ವಿರೋಧಿಸಿ ನಾಗರಿಕರ ಪ್ರತಿಭಟನೆ (ಸಂಗ್ರಹ ಚಿತ್ರ)   

ಕೊಚ್ಚಿ: ‘ಲಕ್ಷದ್ವೀಪದ ಜನವಸತಿ ಪ್ರದೇಶಗಳಲ್ಲಿ ತೆಂಗು– ತಾಳೆ ಗರಿಗಳು, ಎಳನೀರು ಚಿಪ್ಪುಗಳ ತ್ಯಾಜ್ಯ ಕಂಡು ಬಂದರೆ, ಸಂಬಂಧಿಸಿದ ಜಾಗದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ‘ ಎಂದು ನಿಯಮ ಜಾರಿಗೆ ತರಲು ಹೊರಟಿರುವ ಅಲ್ಲಿನ ಆಡಳಿತ ಕ್ರಮವನ್ನು ವಿರೋಧಿಸಿ ದ್ವೀಪ ಸಮೂಹದ ನಾಗರಿಕರು ಸೋಮವಾರ ‘ತೆಂಗಿನ ಗರಿ, ತಾಳೆ ಗರಿ‘ ಹಿಡಿದು ಪ್ರತಿಭಟನೆ ನಡೆಸಿದರು.

‘ಸೇವ್‌ ಲಕ್ಷದ್ವೀಪ ಫೋರಂ‘(ಎಸ್‌ಎಲ್‌ಎಫ್‌) ಬ್ಯಾನರ್‌ ಅಡಿಯಲ್ಲಿ, ‘ಹಸಿಗೊಬ್ಬರ ಮಾಡುವ ಪದ್ಧತಿ ಪರಿಚಯಿಸಿ‘ ಮತ್ತು ‘ದಂಡ ಹಾಕುವುದನ್ನು ನಿಲ್ಲಿಸಿ‘ ಎಂಬ ಘೋಷಣೆಗಳ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಒಂದು ಗಂಟೆ ಕಾಲ ನಡೆದ ಪ್ರತಿಭಟನೆಯಲ್ಲಿ, ‘ದಂಡ ಹಾಕುವ ಪದ್ಧತಿಯನ್ನು ಹಿಂದಕ್ಕೆ ಪಡೆಯಬೇಕು. ಸಾವಯವ ವಸ್ತುಗಳನ್ನು ಮಣ್ಣಿನ ಫಲವತ್ತತೆ ಹೆಚ್ಚಿಸುವ ಗೊಬ್ಬರವಾಗಿ ಪರಿವರ್ತಿಸುವಂತಹ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಿ‘ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

‘ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೆ ತರದಿದ್ದರೆ, ಜನರಿಗೆ ಸೇರಿದ ಜಾಗದಲ್ಲಿ ಬಿದ್ದಿರುವ ತ್ಯಾಜ್ಯಗಳಿಗೆ ದಂಡ ವಿಧಿಸಲು ಆಡಳಿತಕ್ಕೆ ಹಕ್ಕು ಇರುವುದಿಲ್ಲ‘ ಎಂದು ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.