
ಲಾಲು ಪ್ರಸಾದ್
ಪಟ್ನಾ: ಛತ್ ಪೂಜೆಯ ಅಂಗವಾಗಿ ಊರಿಗೆ ಮರಳುತ್ತಿರುವ ಬಿಹಾರಿಗಳನ್ನು ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಪ್ರಯಾಣಿಸುವಂತೆ ಕೇಂದ್ರ ಸರ್ಕಾರ ಮಾಡಿದೆ. ಅಲ್ಲದೇ, ಬಿಹಾರಕ್ಕೆ ರೈಲುಗಳ ಸಮರ್ಪಕ ಸಂಚಾರಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಶನಿವಾರ ಆರೋಪಿಸಿದ್ದಾರೆ.
ರೈಲಿನಲ್ಲಿ ಜನರು ಇಡುಕಿರಿದಿದ್ದು, ವಿಪರೀತ ಕಷ್ಟ ಅನುಭವಿಸುತ್ತಲೇ ಪ್ರಯಾಣಿಸುತ್ತಿರುವ ವಿಡಿಯೊವನ್ನು ಲಾಲೂ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
‘ದೇಶದಲ್ಲಿರುವ 13,198 ರೈಲುಗಳ ಪೈಕಿ 12000 ರೈಲುಗಳನ್ನು ಛತ್ ಪೂಜೆಯ ಸಲುವಾಗಿ ಬಿಹಾರದ ಪ್ರಯಾಣಕ್ಕೆ ನಿಯೋಜಿಸಲಾಗಿದೆ ಎಂದು ಸುಳ್ಳುಗಳ ಸರದಾರ, ಹುಸಿ ಭರವಸೆಗಳ ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಇದು ಕೂಡ ದೊಡ್ಡ ಸುಳ್ಳು. ನನ್ನ ಬಿಹಾರಿ ಜನರನ್ನು ಈ ರೀತಿ ಅಮಾನವೀಯವಾಗಿ ಪ್ರಯಾಣಿಸುವಂತೆ ಮಾಡಲಾಗಿದೆ’ ಎಂದು ಲಾಲೂ ಬರೆದಿದ್ದಾರೆ.
ಛತ್ ಪೂಜೆಗಾಗಿ 12000 ವಿಶೇಷ ರೈಲುಗಳನ್ನು ಬಿಹಾರದಲ್ಲಿ ಸಂಚಾರಕ್ಕಾಗಿ ಭಾರತೀಯ ರೈಲ್ವೆ ನಿಯೋಜಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಹೇಳಿದ್ದರು.
ಬಿಹಾರದ ರೈಲುಗಳಲ್ಲಿ ಎಷ್ಟು ಜನ ಪಯಣಿಸಲು ಸಾಧ್ಯವೋ ಅದರ ದುಪ್ಪಟ್ಟು ಮಂದಿ ಸಂಚರಿಸುತ್ತಿದ್ದಾರೆ. ಇದು ಎನ್‌ಡಿಎ ಸರ್ಕಾರದ ಆಡಳಿತದ ವೈಖರಿಗೆ ಕನ್ನಡಿ ಹಿಡಿದಿದೆ- ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ