ಪಟ್ನಾ: ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರೈಲ್ವೆ ಇಲಾಖೆಯೇ ಕಾರಣ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ದೂಷಿಸಿದ್ದು, ಮಹಾ ಕುಂಭಮೇಳ ‘ಅರ್ಥಹೀನ’ ಎಂದು ಹೇಳುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಅವರು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕಾಲ್ತುಳಿತ ಘಟನೆಯು ಅತ್ಯಂತ ಆತಂಕಕಾರಿಯಾಗಿದೆ. ಇದು ಕೇಂದ್ರ ಸರ್ಕಾರ ಅಸಮರ್ಪಕ ವ್ಯವಸ್ಥೆಗಳನ್ನು ಬಹಿರಂಗಪಡಿಸಿದೆ. ಇದು ರೈಲ್ವೆ ಇಲಾಖೆಯ ಸಂಪೂರ್ಣ ವೈಫಲ್ಯವಾಗಿದೆ. ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಲಕ್ಷಾಂತರ ಮಂದಿ ಹೋಗುವ ಕುರಿತು ಪ್ರತಿಕ್ರಿಯಿಸಿದ ಲಾಲು, ‘ಮಹಾಕುಂಭಮೇಳಕ್ಕೆ ಯಾವುದೇ ಅರ್ಥವಿಲ್ಲ, ಅದು ಅರ್ಥಹೀನ’ ಎಂದು ಹೇಳಿದ್ದಾರೆ.
ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಹಾರ ಬಿಜೆಪಿ ವಕ್ತಾರ ಮನೋಜ್ ಶರ್ಮಾ, ‘ಇದು ಹಿಂದೂ ಧರ್ಮದ ಬಗ್ಗೆ ಆರ್‌ಜೆಡಿ ಹೊಂದಿರುವ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಲಾಲು ಪ್ರಸಾದ್ ತಮ್ಮ ತುಷ್ಟೀಕರಣ ರಾಜಕೀಯದಿಂದಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್‌ಜೆಡಿ ನಾಯಕರು ಯಾವಾಗಲೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸುತ್ತಾರೆ’ ಎಂದು ತಿಳಿಸಿದ್ದಾರೆ.
ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತ ಅವಘಡದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.