ADVERTISEMENT

ಲಾಲೂ ಕುಟುಂಬ ‘ಕದನ’ | ತೇಜಸ್ವಿ, ಆಪ್ತರಿಂದ ನಿಂದನೆ: ರೋಹಿಣಿ ಆರೋಪ

‘ಕಿಡ್ನಿ ದಾನದ ವಿಷಯದಲ್ಲೂ ಕೆಟ್ಟ ಆರೋಪ’

ಪಿಟಿಐ
Published 16 ನವೆಂಬರ್ 2025, 11:34 IST
Last Updated 16 ನವೆಂಬರ್ 2025, 11:34 IST
<div class="paragraphs"><p>ಲಾಲೂ ಪ್ರಸಾದ್ ಯಾದವ್ ಮತ್ತು ರೋಹಿಣಿ ಆಚಾರ್ಯ</p></div>

ಲಾಲೂ ಪ್ರಸಾದ್ ಯಾದವ್ ಮತ್ತು ರೋಹಿಣಿ ಆಚಾರ್ಯ

   

ಎಕ್ಸ್ ಚಿತ್ರ

ಪಟ್ನಾ: ಆರ್‌ಜೆಡಿ ಅಧ್ಯಕ್ಷ ಲಾಲೂ ಕುಟುಂಬದ ಆಂತರಿಕ ‘ಕದನ’ ಮುಂದುವರಿದಿದ್ದು, ‘ಸಹೋದರ ತೇಜಸ್ವಿ ಹಾಗೂ ಅವರ ಆಪ್ತರಾದ ರಾಜ್ಯಸಭಾ ಸದಸ್ಯ ಸಂಜಯ್‌ ಯಾದವ್‌ ಮತ್ತು ರಮೀಜ್‌ ನನ್ನನ್ನು ನಿಂದಿಸಿದ್ದಾರೆ’ ಎಂದು ಲಾಲೂ ಪ್ರಸಾದ್‌ ಪುತ್ರಿ ರೋಹಿಣಿ ಆಚಾರ್ಯ ಅವರು ಆರೋಪಿಸಿದ್ದಾರೆ.

ADVERTISEMENT

ರಾಜಕೀಯ ಮತ್ತು ಕುಟುಂಬವನ್ನು ತ್ಯಜಿಸುವುದಾಗಿ ಶನಿವಾರ ಘೋಷಿಸಿದ್ದ ಲಾಲೂ ಪ್ರಸಾದ್‌ ಕಿರಿಯ ಪುತ್ರಿ ರೋಹಿಣಿ, ಭಾನುವಾರವೂ ಸಾಮಾಜಿಕ ಜಾಲ ತಾಣದ ಮೂಲಕ ಹಲವು ಆರೋಪಗಳನ್ನು ಮಾಡಿದ್ದಾರೆ. 

‘ಕೋಟ್ಯಂತರ ರೂಪಾಯಿ ಹಣ ಮತ್ತು ಪಕ್ಷದ ಟಿಕೆಟ್‌ಗಾಗಿ ತನ್ನ ತಂದೆಗೆ ಕೊಳಕು ಮೂತ್ರಪಿಂಡವನ್ನು ನಾನು ದಾನ ಮಾಡಿದ್ದೇನೆ’ ಎಂದು ಸಹೋದರ ತೇಜಸ್ವಿ ಯಾದವ್‌ ಅವರ ಆಪ್ತರು ಆರೋಪಿಸಿದ್ದಾರೆ ಮತ್ತು ನನ್ನನ್ನು ನಿಂದಿಸಿ, ಮನೆಯಿಂದ ಹೊರಗೆ ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.

ಲಾಲೂ ಪ್ರಸಾದ್‌ ಅವರು ಮೂತ್ರಪಿಂಡದ ಸಮಸ್ಯೆ ಯಿಂದಾಗಿ ಬಳಲುತ್ತಿದ್ದಾಗ ರೋಹಿಣಿ ಅವರು ಮೂತ್ರಪಿಂಡ ವನ್ನು ದಾನ ಮಾಡಿದ್ದರು.

‘ವಿವಾಹಿತ ಮಹಿಳೆಯು ತನ್ನ ಪೋಷಕರನ್ನು ರಕ್ಷಿಸಲು ಏನನ್ನೂ ಮಾಡಬಾರದು. ಒಂದು ವೇಳೆ ಸಹೋದರರಿದ್ದರೆ ಅವರ ಅಥವಾ ಅವರ ಸ್ನೇಹಿತರ ಮೂತ್ರಪಿಂಡವನ್ನು ದಾನ ಮಾಡುವಂತೆ ಹೇಳಬೇಕು. ನನ್ನ ಪತಿ ಮತ್ತು ಅತ್ತೆಯ ಅನುಮತಿ ಪಡೆಯದೇ, ಮೂವರು ಮಕ್ಕಳ ಬಗ್ಗೆ ಯೋಚಿಸದೇ ನನ್ನ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ನಾನು ಪಾಪ ಮಾಡಿದ್ದೇನೆ. ಯಾವ ಹೆಣ್ಣು ಮಕ್ಕಳಿಗೂ ಇಂಥ ಗತಿ ಬರದಿರಲಿ’ ಎಂದು ರೋಹಿಣಿ ಹೇಳಿದರು.

‘ವಿವಾಹಿತ ಮಹಿಳೆ ಮತ್ತು ಒಬ್ಬಳು ತಾಯಿ ಎನ್ನುವುದನ್ನೂ ಪರಿಗಣಿಸದೇ ನಿಂದಿಸಲಾಯಿತು ಮತ್ತು ನನ್ನ ಮೇಲೆ ಚಪ್ಪಲಿ ಎಸೆಯುವ ಪ್ರಯತ್ನ ನಡೆಯಿತು. ಆದ್ದರಿಂದ ನಾನು ನನ್ನ ತಾಯಿ ಮತ್ತು ಸಹೋದರಿಯರನ್ನು ತೊರೆದು ಮನೆಯಿಂದ ಹೊರಬರಬೇಕಾಯಿತು’ ಎಂದು ಆರೋಪಿಸಿದರು.

‘ನಾನು ಅನಾಥಳಾಗಿದ್ದೇನೆ. ಯಾವ ಮನೆಯಲ್ಲೂ ರೋಹಿಣಿಯಂಥ ಹಣೆಬರಹ ಹೊಂದಿರುವ ಮಗಳು ಅಥವಾ ಸಹೋದರಿ ಜನಿಸದಿರಲಿ ಎಂದು ಬಯಸುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಹಾರ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಯಾರಾದರೂ ಹೊಣೆ ಹೊತ್ತುಕೊಳ್ಳಬೇಕು ಎಂದು ಸೂಚಿಸಿರುವುದೇ ಕುಟುಂಬದೊಳಗಿನ ಕದನಕ್ಕೆ ಕಾರಣ ಎಂದು ರೋಹಿಣಿ ಶನಿವಾರ ಸುಳಿವು ನೀಡಿದ್ದರು.

ಸಂಜಯ್‌ ಮತ್ತು ರಮೀಜ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ರೋಹಿಣಿ. ‘ಚಾಣಕ್ಯನಂತೆ ಕಾರ್ಯತಂತ್ರ ರೂಪಿಸುತ್ತೇವೆ ಎಂದವರು ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯವನ್ನು ಪರಿಗಣಿಸಲಿಲ್ಲ’ ಎಂದರು. 

ರಮೀಜ್‌ ವಿರುದ್ಧ ಪೋಸ್ಟ್ ಹಾಕಿರುವ ರೋಹಿಣಿ, ‘ರಮೀಜ್‌ ಕ್ರಿಮಿನಲ್ ಬುದ್ಧಿಯ ಗ್ಯಾಂಗ್‌ಸ್ಟರ್‌, ಸಂಜಯ್‌ ಯಾದವ್‌ ಪರ ಕೆಲಸ ಮಾಡುವ ಕೊಲೆ ಆರೋಪಿ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.